ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ

ಚಿಕ್ಕಬಳ್ಳಾಪುರ: ತಮಿಳುನಾಡಿನ ಮೇಲ್ ಮರವತ್ತೂರಿನಲ್ಲಿ ಕನ್ನಡಿಗರ ಮೇಲೆ ತಮಿಳಿಗರು ಮನಸ್ಸೋ ಇಚ್ಛೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ನಗರ ಹಾಗೂ ಯಲಹಂಕ ಬಳಿಯ ಸಿಂಗನಾಯಕನಹಳ್ಳಿಯಿಂದ ಖಾಸಗಿ ಬಸ್ ಮೂಲಕ 53 ಮಂದಿ ಭಕ್ತರು ಮೇಲ್ ಮರವತ್ತೂರಿನ ಆದಿ ಪರಾಶಕ್ತಿ ಶ್ರೀ ಓಂ ಶಕ್ತಿ ದೇವಸ್ಥಾನಕ್ಕೆ ಗುರುವಾರ ತೆರಳಿದ್ದರು. ಶುಕ್ರವಾರ ಬೆಳಗ್ಗೆ ದೇವರ ದರ್ಶನ ಮುಗಿಸಿ ವಾಪಸ್ ಬರುವಾಗ ಪಾರ್ಕಿಂಗ್ ಜಾಗದ ಬಳಿ ತಮಿಳಿಗರು ಕಿರಿಕ್ ಮಾಡಿ, ಕನ್ನಡಿಗರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಮೆರೆದಿದ್ದಾರೆ.

ಪಾರ್ಕಿಂಗ್ ಜಾಗದಲ್ಲಿ ಬಸ್ ಹಾಕಿಲ್ಲ ಎಂದು ಕಿರಿಕ್ ತೆಗೆದ ತಮಿಳಿಗರು, ಮೊದಲು ಚಾಲಕನ ಜೊತೆ ಕಿರಿಕ್ ಮಾಡಿದ್ದಾರೆ. ನಂತರ ಅಲ್ಲಿಂದ ಬಸ್ ತೆಗೆಯಲು ಹೋದಾಗ ಟ್ರಾಫಿಕ್ ಜಾಮ್ ಉಂಟಾಗಿ ಸಮಸ್ಯೆ ಆಗಿದೆ. ಈ ವೇಳೆ ‘ಏನು ಮದ್ಯಪಾನ ಮಾಡಿ ಗಾಡಿ ಒಡಿಸ್ತೀದಿಯಾ’ ಎಂದು ಗಲಾಟೆ ಶುರು ಮಾಡಿದ್ದಾರೆ. ಈ ವಿಚಾರಕ್ಕೆ ಚಾಲಕ ಹಾಗೂ ತಮಿಳಿಗರ ನಡುವೆ ದೊಡ್ಡ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಚಾಲಕನ ಪರ ಹೋದ ಕನ್ನಡಿಗ ಭಕ್ತರ ಮೇಲೂ 10-15 ಮಂದಿಯ ಗುಂಪು ದೌರ್ಜನ್ಯ ಮಾಡಿ ಬಸ್ ಹತ್ತಿಸಿರೋ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಚಾಲಕ ಹಾಗೂ ಕ್ಲೀನರ್ ಗೆ ಮನಸ್ಸೋ ಇಚ್ಛೆ ಕೋಲಿನಿಂದ ಥಳಿಸಿದ್ದಾರೆ. ಅಲ್ಲದೇ ಅವರಿಗೆ ಎದುರು ಮಾತನಾಡಿದ ಭಕ್ತರ ಮೇಲೆಯೂ ಹಲ್ಲೆ ಮಾಡಲಾಗಿದೆ. ಹಲ್ಲೆಯ ದೃಶ್ಯ ಸೆರೆ ಹಿಡಿದವರ ಮೊಬೈಲ್‍ಗಳನ್ನು ಸಹ ಕಸಿದುಕೊಳ್ಳಲಾಗಿದೆ. ಕೊನೆಗೆ ಕನ್ನಡಿಗರು ಸುಮ್ಮನಾಗಿ ವಾಪಸ್ ಬಂದಿದ್ದಾರೆ.

ಸದ್ಯಕ್ಕೆ ಹಲ್ಲೆ ವಿಚಾರ ಕಸ್ತೂರಿ ಕನ್ನಡಪರ ಸಂಘಟನೆ ಪದಾಧಿಕಾರಿಗಳ ಗಮನಕ್ಕೆ ಬಂದಿದ್ದು, ಇಂದು ದೂರು ಕೊಡಲು ಮುಂದಾಗಿದ್ದಾರೆ. ಇದೆಲ್ಲಾ ಬಸ್‍ನ ಹಿಂಭಾಗ ಕನ್ನಡದ ಧ್ವಜ ಕಟ್ಟಿಕೊಂಡು ಹೋಗಿದ್ದಕ್ಕೆ ಕಿರಿಕ್ ಮಾಡಿ ತಮಿಳಿಗರು ಈ ರೀತಿ ಹಲ್ಲೆ ನಡೆಸಿದ್ದಾರೆ ಎಂಬುದು ಕನ್ನಡಪರ ಸಂಘಟನೆಯ ಆರೋಪವಾಗಿದೆ.

Comments

Leave a Reply

Your email address will not be published. Required fields are marked *