ಸಿನಿಮಾಕ್ಕಾಗಿ ಒತ್ತೆಕೋಲದ ದೃಶ್ಯ ಮರುಸೃಷ್ಟಿ – ಚಿತ್ರತಂಡದ ವಿರುದ್ಧ ಭಕ್ತರು ಗರಂ

ಮಂಗಳೂರು: ತುಳುನಾಡಿನ ಒತ್ತೆಕೋಲದ ಆಚರಣೆಯನ್ನು ಸಿನಿಮಾಕ್ಕಾಗಿ ಮರುಸೃಷ್ಟಿ ಮಾಡಿರುವುದು ಕರಾವಳಿ ಭಕ್ತರ ಕೋಪಕ್ಕೆ ಕಾರಣವಾಗಿದ್ದು, ಚಿತ್ರತಂಡದ ವಿರುದ್ಧ ಭಕ್ತಾಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

`ಆನಂದ್’ ಸಿನಿಮಾದ ಚಿತ್ರೀಕರಣ ಮಂಗಳೂರಿನ ಪೊಳಲಿ ದೇವಸ್ಥಾನ ಆವರಣದಲ್ಲಿ ನಡೆಯುತ್ತಿತ್ತು. ಚಿತ್ರದಲ್ಲಿ ರಚಿತಾರಾಮ್ ಒತ್ತೆಕೋಲ ಸೇವೆ ಅರ್ಪಿಸುವ ದೃಶ್ಯಕ್ಕಾಗಿ ಸಂಪೂರ್ಣ ಒತ್ತೆಕೋಲದ ಮಾದರಿಯನ್ನು ಮರುಸೃಷ್ಟಿ ಮಾಡಿ ಚಿತ್ರೀಕರಣ ಮಾಡಲಾಗಿತ್ತು. ಆದರೆ, ಮನರಂಜನೆಗಾಗಿ ಕರಾವಳಿಯ ಜನರು ಭಕ್ತಿಯಿಂದ ಸಲ್ಲಿಸುವ ಒತ್ತೆಕೋಲ ಸೇವೆಯನ್ನು ಮರುಸೃಷ್ಟಿ ಮಾಡಿದ್ದು ಸರಿಯಲ್ಲ ಎಂದು ಭಕ್ತಾಧಿಗಳು ಗರಂ ಆಗಿದ್ದಾರೆ.

ಒತ್ತೆಕೋಲ ಸೇರಿದಂತೆ ಭೂತಾರಾಧನೆಯಂಥ ಜನಪದ ಆಚರಣೆಗಳನ್ನು ಮನರಂಜನೆಗಾಗಿ ಮಾಡುವುದು ತಪ್ಪು. ಭೂತಾರಾಧನೆಯನ್ನು ಪ್ರದರ್ಶನ ರೂಪದಲ್ಲಿ ಮಾಡಿ ಆರಾಧನೆಗೆ ಅಪಮಾನ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರತಂಡದ ವಿರುದ್ಧ ಭಕ್ತರು ಸಿಡಿದೆದ್ದಿದ್ದಾರೆ.

ಒತ್ತೆಕೋಲ ಉತ್ತರ ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ನಡೆಯುವ ಅಪರೂಪದ ಭಕ್ತಿ ಆರಾಧನೆಯಾಗಿದ್ದು, ಇಡೀ ರಾತ್ರಿ ನಡೆಯುತ್ತದೆ. ಭೂತದ ಪಾತ್ರಧಾರಿ ಆವೇಶದಲ್ಲಿ ಬೆಂಕಿಯ ರಾಶಿಗೆ ಬಿದ್ದು ಹೊರಳಾಡುವ ಪ್ರಸಂಗ ಇದರಲ್ಲಿದ್ದು, ಅದನ್ನು ಸಿನಿಮಾದಲ್ಲಿ ಕೇವಲ ಮನರಂಜನೆಗಾಗಿ ಮರು ಸೃಷ್ಟಿ ಮಾಡಲಾಗಿದೆ. ಈ ಮೂಲಕ ಭಕ್ತರ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ ರಾತ್ರಿ ಹೊತ್ತಿನಲ್ಲಿ ನಡೆದ ಈ ಚಿತ್ರೀಕರಣದ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದು ಭಾರೀ ವಿರೋಧ ಕೇಳಿಬರುತ್ತಿದೆ.

Comments

Leave a Reply

Your email address will not be published. Required fields are marked *