ಸಿಎಂ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ

ಮುಂಬೈ: ವಿಶ್ವಾಸಮತಯಾಚನೆಗೂ ಮುನ್ನವೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.

ಇಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಬುಧವಾರ ಸಂಜೆ 5 ಗಂಟೆಯ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಬಿಜೆಪಿ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶದ ಬಳಿಕ ಸಂಖ್ಯಾಬಲ ಇಲ್ಲದ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನೀಡುವುದಾಗಿ ಫಡ್ನವೀಸ್ ಪ್ರಕಟಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಂದ್ರ ಫಡ್ನವೀಸ್, ಚುನಾವಣೆಯಲ್ಲಿ 105 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಚುನಾವಣೆಯಲ್ಲಿ ಜೊತೆಯಾಗಿದ್ದ ಶಿವಸೇನೆ ಜನಾದೇಶವನ್ನು ಧಿಕ್ಕರಿಸಿತು. ಶಿವಸೇನೆ ನಂಬರ್ ಆಟಕ್ಕೆ ಮುಂದಾಗಿ ಚೌಕಾಸಿಗೆ ಮುಂದಾಯಿತು. ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಎಂದು ತೀರ್ಮಾನವಾಗಿರಲಿಲ್ಲ. ಫಲಿತಾಂಶದ ಬಳಿಕ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ ಆಗ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದ್ದರು. ಖಾಸಗಿ ವಾಹಿನಿ ನೀಡಿದ ಸಂದರ್ಶನದಲ್ಲಿಯೂ ಅಮಿತ್ ಈ ಬಗ್ಗೆ ಹಲವು ಬಾರಿ ಸ್ಪಷ್ಟಪಡಿಸಿದ್ದರು ಎಂದು ಹೇಳಿದರು.

ಮೊದಲ ಬಾರಿಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಿದಾಗ ನಮ್ಮ ಜೊತೆಗೆ ಶಿವಸೇನೆ ಇಲ್ಲ. ಹಾಗಾಗಿ ನಾವು ಸರ್ಕಾರ ರಚನೆ ಮಾಡಲ್ಲ ಎಂದು ಹೇಳಿದ್ದೇವೆ. ಹೀಗೆ ರಾಜ್ಯಪಾಲರು ಪ್ರತಿಯೊಂದು ಪಕ್ಷಕ್ಕೂ ಸರ್ಕಾರ ರಚನೆಗೆ ಆಹ್ವಾನಿಸಿದ್ದರು. ಯಾರು ಸರ್ಕಾರ ರಚನೆಗೆ ಮುಂದಾಗದೇ ಇದ್ದಾಗ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಲಾಗಿತ್ತು. ತದನಂತರ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಸರ್ಕಾರ ರಚನೆಯ ಕಸರತ್ತು ಮುಂದುವರಿಸಿದ್ದವು ಎಂದು ತಿಳಿಸಿದರು.

ಅಜಿತ್ ಪವಾರ್ ಬೆಂಬಲ ನೀಡಿದಾಗ ಸರ್ಕಾರ ರಚಿಸುವ ಪ್ರಸ್ತಾಪವನ್ನು ಸಲ್ಲಿಸಿ ಪ್ರಮಾಣ ವಚನ ಸ್ವೀಕರಿಸಲಾಯ್ತು. ಸದ್ಯ ನಮ್ಮ ಬಳಿ ಬಹುಮತ ಇಲ್ಲ. ಹಾಗಾಗಿ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ಬಿಜೆಪಿ ವಿಪಕ್ಷ ಸ್ಥಾನದಲ್ಲಿ ಕುಳಿತು ಸಮರ್ಥವಾಗಿ ಕೆಲಸ ಮಾಡುತ್ತದೆ. ಬೇರೆ ಬೇರೆ ಮನಸ್ಸಿನ ಜನರು ಹೇಗೆ ಸರ್ಕಾರ ನಡೆಸುತ್ತಾರೆ ಎಂಬುವುದು ಗೊತ್ತಾಗುತ್ತಿಲ್ಲ ಎಂದರು.

Comments

Leave a Reply

Your email address will not be published. Required fields are marked *