ಚುನಾವಣಾ ಸಂದರ್ಭದಲ್ಲಿ ದೇವೇಗೌಡರಿಗೆ ಸಂಕಷ್ಟ!

ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲೆಯೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಸಂಕಷ್ಟ ಎದುರಾಗಿದ್ದು, ಕಾಲ ಮೇಲೆ ಬಿಸಿ ನೀರು ಬಿದ್ದ ಪರಿಣಾಮ ನಡೆಯದಾಗದ ಸ್ಥಿತಿಯಲ್ಲಿ  ಇದ್ದಾರೆ.

ಲೋಕಸಮರಕ್ಕೆ ದೇವೇಗೌಡರು ತುಮಕೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಚಾರದಲ್ಲಿ ತೊಡಗಬೇಕಾದ ದೇವೇಗೌಡರು ಕಾಲು ನೋವಿನಿಂದ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ.

ಕಾಲು ಊರುವುದು ಸಹ ಕಷ್ಟವೆಂಬ ಸ್ಥಿತಿಯಲ್ಲಿ ಎಚ್‍ಡಿಡಿ ಇದ್ದಾರೆ. ಇತ್ತೀಚಿಗಷ್ಟೆ ದೇವೇಗೌಡರು ತಮ್ಮ ಬಲಗಾಲನ್ನು ಉಳುಕಿಸಿಕೊಂಡಿದ್ದರು. ಈಗ ಅದೇ ಕಾಲಿನ ಪಾದಕ್ಕೆ ಸಮಸ್ಯೆ ಉಂಟಾಗಿದೆ. ಸೋಮವಾರದಂದು ದೇವಸ್ಥಾನಕ್ಕೆ ಹೋಗುವಾಗ ಬರಿಗಾಲಿನಲ್ಲಿ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದರು. ಬಳಿಕ ನಾಮಪತ್ರ ಸಲ್ಲಿಕೆ ವೇಳೆಯು ಪಾದರಕ್ಷೆ ಹಾಕದೇ ಬರಿಗಾಲಿನಲ್ಲಿ ನಡೆದ ಪರಿಣಾಮ ಪಾದದಲ್ಲಿ ಗುಳ್ಳೆಗಳು ಆಗಿದ್ದವು. ಉರಿ ಬಿಸಿಲಿನ ಝಳಕ್ಕೆ ಕಾದಿದ್ದ ನೆಲದ ಮೇಲೆ ನಡೆದ ಪರಿಣಾಮ ಎಚ್‍ಡಿಡಿ ಅವರ ಪಾದದಲ್ಲಿ ಎರಡು ಮೂರು ಗುಳ್ಳೆ ಎದ್ದಿದ್ದು, ನಡೆಯಲಾಗದ ಸ್ಥಿತಿಯಲ್ಲಿ ದೇವೇಗೌಡರು ಇದ್ದಾರೆ.

ಇದೇ ಸಂದರ್ಭದಲ್ಲಿ ಮೊದಲೇ ಗುಳ್ಳೆಗಳು ಆಗಿ ನೋವು ಕಾಣಿಸಿಕೊಂಡಿರುವ ಪಾದಕ್ಕೆ ಆಕಸ್ಮಿಕವಾಗಿ ಬಿಸಿ ನೀರು ಬಿದ್ದು ಮತ್ತಷ್ಟು ನೋವಾಗಿದೆ. ಇಂದು ಮನೆಯಲ್ಲಿ ಕಾಲು ತೊಳೆಯುವಾಗ ಈ ಅಚಾತುರ್ಯ ಸಂಭವಿಸಿದೆ. ತಣ್ಣೀರಿನ ಬದಲು ಬಿಸಿನೀರಿನ ಟ್ಯಾಪ್ ಓಪನ್ ಮಾಡಿದ ಪರಿಣಾಮ ಪಾದಕ್ಕೆ ಬಿಸಿನೀರು ಬಿದ್ದು ಗುಳ್ಳೆ ಒಡೆದಿದೆ. ಸದ್ಯ ವೈದ್ಯರು ಔಷಧ ನೀಡಿದ್ದಾರೆ, ಆದರೇ ಕಳೆದ ಎರಡು ದಿನಗಳಿಂದ ಕಾಲು ನೋವಿನಿಂದ ಬಳಲುತ್ತಿದ್ದ ದೇವೇಗೌಡರಿಗೆ ಮತ್ತಷ್ಟು ನೋವು ಕಾಣಿಸಿಕೊಂಡಿದೆ. ಆದರಿಂದ ಇಂದು ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *