ಹಳಿತಪ್ಪಿದ ಎಲ್‌ಪಿಜಿ ಸಾಗಿಸ್ತಿದ್ದ ಗೂಡ್ಸ್ ರೈಲು – ದುರಂತದಿಂದ ಪಾರು

ಭೋಪಾಲ್: ಎಲ್‌ಪಿಜಿ (LPG) ಸಾಗಿಸಲಾಗುತ್ತಿದ್ದ ಗೂಡ್ಸ್ ರೈಲಿನ (Goods Train) 2 ವ್ಯಾಗನ್‌ಗಳು ಹಳಿ ತಪ್ಪಿರುವ ಘಟನೆ ಮಧ್ಯಪ್ರದೇಶದ (Madhya Pradesh) ಜಬಲ್‌ಪುರದ (Jabalpur) ಶಹಪುರದಲ್ಲಿ ನಡೆದಿದೆ ಎಂದು ಬುಧವಾರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಭಾರೀ ದುರಂತ ತಪ್ಪಿದೆ.

ಗೂಡ್ಸ್ ರೈಲಿನಿಂದ ಅನ್‌ಲೋಡ್ ಮಾಡಲು ಇರಿಸಿದ್ದಾಗ ಘಟನೆ ನಡೆದಿದೆ ಎಂದು ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಮಾಹಿತಿ ನೀಡಿದೆ.

ಕಳೆದ ರಾತ್ರಿ ಗೂಡ್ಸ್ ರೈಲಿನ ಎಲ್‌ಪಿಜಿ ರೇಕ್‌ನ ಎರಡು ವ್ಯಾಗನ್‌ಗಳನ್ನು ಇಳಿಸಲು ಮುಂದಾದಾಗ ಹಳಿತಪ್ಪಿದೆ. ಸದ್ಯ ರೈಲುಗಳ ಯಾವುದೇ ಮುಖ್ಯ ಸಂಚಾರಕ್ಕೆ ತೊಂದರೆಯಾಗಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ. ಬೆಳಗ್ಗೆ ಸೈಡಿಂಗ್ ಅಧಿಕಾರಿಗಳ ಸಮ್ಮುಖದಲ್ಲಿ ಹಳಿತಪ್ಪಿದ ರೈಲನ್ನು ಮರುಸ್ಥಾಪಿಸಲಾಗಿದೆ ಎಂದು ರೈಲ್ವೆ ತಿಳಿಸಿದೆ. ಇದನ್ನೂ ಓದಿ: ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಜಾರ್ಖಂಡ್‍ನಲ್ಲಿ ತಪ್ಪಿತ್ತು ರೈಲು ದುರಂತ!

ಕಳೆದ ವಾರ ಒಡಿಶಾದ ಬಾಲಸೋರ್‌ನಲ್ಲಿ 3 ರೈಲುಗಳು ಅಪಘಾತಕ್ಕೀಡಾಗಿದ್ದು, 275 ಜನರು ಸಾವನ್ನಪ್ಪಿದ್ದಾರೆ. 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ದೇಶದಲ್ಲೇ ಸಂಭವಿಸಿದ ಅತ್ಯಂತ ಭೀಕರ ರೈಲ್ವೆ ದುರಂತಗಳಲ್ಲಿ ಒಂದು ಎನಿಸಿಕೊಂಡಿದೆ.

ಈ ಕಹಿ ಘಟನೆ ಮಾಸುವ ಮುನ್ನವೇ ಮಂಗಳವಾರ ಜಾರ್ಖಂಡ್‌ನಲ್ಲಿ ರೈಲು ದುರಂತವೊಂದು ತಪ್ಪಿದೆ. ಜಾರ್ಖಂಡ್‌ನ ಬೊಕಾರೊದಲ್ಲಿ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಗೇಟ್‌ಗೆ ಟ್ರ್ಯಾಕ್ಟರ್ ಸಿಲುಕಿಕೊಂಡಿತ್ತು. ದೂರದಿಂದಲೇ ಇದನ್ನು ಗಮನಿಸಿದ ಲೋಕೋ ಪೈಲಟ್ ಕೂಡಲೆ ರೈಲಿನ ವೇಗವನ್ನು ಕಡಿಮೆ ಮಾಡಿ ಅನಾಹುತವನ್ನು ತಪ್ಪಿಸಿದ್ದಾರೆ. ಇದನ್ನೂ ಓದಿ: ರೈಲ್ವೆ ಸಚಿವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದು, ರಾಜೀನಾಮೆಗೆ ಆಗ್ರಹ ಸರಿಯಲ್ಲ: ಹೆಚ್‌ಡಿಡಿ