ಪಿಎಂಜಿಕೆವೈ ಅಡಿಯಲ್ಲಿ ಎಷ್ಟು ಕೋಟಿ ಕಪ್ಪು ಹಣ ಘೋಷಣೆಯಾಗಿದೆ ಗೊತ್ತಾ?

ನವದೆಹಲಿ: ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ(ಪಿಎಂಜಿಕೆವೈ) ಅಡಿಯಲ್ಲಿ ಒಟ್ಟು 5 ಸಾವಿರ ಕೋಟಿ ರೂ. ಆಘೋಷಿತ ಆಸ್ತಿ ಘೋಷಣೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ನಿರೀಕ್ಷೆ ಮಾಡಿದಷ್ಟು ಹಣ ಘೋಷಣೆಯಾಗಿಲ್ಲ. ಪಿಎಂಜಿಕೆವೈ ಅಡಿ ಒಟ್ಟು 5 ಸಾವಿರ ಕೋಟಿ ರೂ. ಆಘೋಷಿತ ಆಸ್ತಿ ಘೋಷಣೆಯಾಗಿದೆ. ಆಸ್ತಿ ಕಡಿಮೆ ಘೋಷಣೆಯಾಗಲು ಎರಡು ಪ್ರಮುಖ ಅಂಶಗಳು ಕಾರಣ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಯೋಜನೆ ಪ್ರಕಟವಾಗುವುದಕ್ಕೂ ಮೊದಲು ಜನರು ಬೇರೆ ಬೇರೆ ಖಾತೆಗಳಲ್ಲಿ ಹಣವನ್ನು ಇಡಲು ಪ್ರಯತ್ನ ನಡೆಸಿದ್ದಾರೆ. ಎರಡನೇಯದು ತೆರಿಗೆ ಮತ್ತು ದಂಡದ ದರದಿಂದಾಗಿ ಕಡಿಮೆ ಪ್ರಮಾಣದಲ್ಲಿ ಘೋಷಣೆಯಾಗಿದೆ ಎಂದು ಅವರು ಹೇಳಿದರು.

ಪಿಎಂಜಿಕೆವೈ ಯೋಜನೆ ಘೋಷಣೆಯಾಗುವುದಕ್ಕೂ ಮೊದಲು ಆದಾಯ ಘೋಷಣಾ ಯೋಜನೆ(ಐಡಿಎಸ್) ತಂದಿತ್ತು. 2016ರ ಜೂನ್ ನಿಂದ ಸೆಪ್ಟೆಂಬರ್‍ವರೆಗೆ ಮಾತ್ರ ಅವಧಿ ಹೊಂದಿದ್ದ ಈ ಯೋಜನೆಯ ಅಡಿ ಒಟ್ಟು 67,382 ಕೋಟಿ ರೂ. ಅಕ್ರಮ ಆದಾಯ ಘೋಷಣೆ ಆಗಿತ್ತು. ಐಡಿಎಸ್ ಅಡಿ ಬರುವ ಮಾಹಿತಿಯನ್ನು ಗೌಪ್ಯವಾಗಿಟ್ಟು, ಬೇರೆ ಯಾವುದೇ ಇಲಾಖೆಗೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು.

ಏನಿದು ಪಿಎಂಜಿಕೆವೈ?
ನವೆಂಬರ್ 8ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಕಪ್ಪುಕುಳಗಳಿಗೆ ತಮ್ಮಲ್ಲಿರುವ ಆದಾಯವನ್ನು ಸಕ್ರಮಗೊಳಿಸಲು ಕೊನೆಯ ಬಾಗಿಲು ಎನ್ನುವಂತೆ ಕೇಂದ್ರ ಸರ್ಕಾರ ಪಿಎಂಜಿಕೆವೈ ಯೋಜನೆಯನ್ನು ಜಾರಿಗೆ ತಂದಿತ್ತು.

ಪಿಎಂಜಿಕೆವೈ ಯೋಜನೆ ಅಡಿ ಠೇವಣಿ ಇಟ್ಟ ಹಣ ಕಪ್ಪು ಹಣಗಳಿಗೆ ಶೇ. 49.9 ರಷ್ಟು ದಂಡ ವಿಧಿಸಲಾಗುತಿತ್ತು. ಅಷ್ಟೇ ಅಲ್ಲದೇ ಶೇ.25ರಷ್ಟು ಹಣವನ್ನು ಆರ್ಬಿಐಯಲ್ಲಿ 4 ವರ್ಷಗಳ ಕಾಲ ಠೇವಣಿ ಇಡಬೇಕಾಗಿತ್ತು. ಈ ರೀತಿಯಾಗಿ ಠೇವಣಿ ಇರಿಸಿದ ಹಣಕ್ಕೆ ಯಾವುದೇ ಬಡ್ಡಿ ಸಿಗುವುದಿಲ್ಲ. ಈ ಯೋಜನೆ ಹೊರತುಪಡಿಸಿ ಸಾಮಾನ್ಯ ಪ್ರಕ್ರಿಯೆ ಮೂಲಕ ತಮ್ಮ ಕಪ್ಪು ಹಣ ಘೋಷಿಸಿಕೊಂಡರೆ ಶೇ. 77.2ರಷ್ಟು ದಂಡ ಸೇರಿದಂತೆ ತೆರಿಗೆ ಕಟ್ಟಬೇಕಿತ್ತು. ಮಾರ್ಚ್ ಕೊನೆಯವರೆಗೆ ಈ ಪಿಎಂಜಿಕೆವೈ ಯೋಜನೆ ಜಾರಿಯಲ್ಲಿತ್ತು.

Comments

Leave a Reply

Your email address will not be published. Required fields are marked *