ಪುಲ್ವಾಮಾ ದಾಳಿಯ ಪ್ರಮುಖ ಉಗ್ರ ಮುದಸ್ಸಿರ್ ಆಪ್ತ ಅರೆಸ್ಟ್

ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಆಪ್ತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಸಜ್ಜದ್ ಖಾನ್ ಬಂಧಿತ ಆರೋಪಿ. ಪೊಲೀಸರು ಸಜ್ಜದ್ ಖಾನ್‍ನನ್ನು ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದಾರೆ. ಜೊತೆಗೆ ಆತನನ್ನು ರಹಸ್ಯ ಸ್ಥಳದಲ್ಲಿಟ್ಟು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಸಜ್ಜದ್ ಖಾನ್ ದೆಹಲಿಯಲ್ಲಿ ಶಾಲು ಮಾರಾಟ ಮಾಡುತ್ತಿದ್ದ. ಜೊತೆಗೆ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಸಂಪರ್ಕದಲ್ಲಿದ್ದ. ಪುಲ್ವಾಮಾ ದಾಳಿಗೂ ಮುನ್ನವೇ ಸಜ್ಜದ್ ಖಾನ್ ದೆಹಲಿಗೆ ಬಂದಿದ್ದ. ಅಷ್ಟೇ ಅಲ್ಲದೆ ದಾಳಿಯ ಬಳಿಕ ಆತನನ್ನು ದೆಹಲಿಯಲ್ಲಿ ಬಚ್ಚಿಡಲಾಗಿತ್ತು.

ಪುಲ್ವಾಮಾ ದಾಳಿಯ ಬಗ್ಗೆ ಸಜ್ಜದ್ ಖಾನ್‍ಗೆ ಎಲ್ಲ ರೀತಿಯ ಮಾಹಿತಿಯಿದೆ. ಅಷ್ಟೇ ಅಲ್ಲದೆ ಅವನ ಇಬ್ಬರು ಸಹೋದರರು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯಲ್ಲಿದ್ದರು. ಆದರೆ ಅವರನ್ನು ಜಮ್ಮು-ಕಾಶ್ಮೀರದಲ್ಲಿ ಯೋಧರು ಹತ್ಯೆ ಮಾಡಿದ್ದರು. 2018ರ ಅಕ್ಟೋಬರ್ ನಲ್ಲಿ ಭಾರತೀಯ ಯೋಧರು ನಡೆಸಿದ್ದ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಂಬಂಧಿ ಉಸ್ಮಾನ್ ಹಾಗೂ ಸಜ್ಜದ್ ಸಹೋದರ ಬಲಿಯಾಗಿದ್ದರು.

ಸಜ್ಜದ್ ಖಾನ್ ಬಂಧನದಿಂದಾಗಿ ಪುಲ್ವಾಮಾ ದಾಳಿಯ ತನಿಖೆಗೆ ಹೊಸ ತಿರುವು ಸಿಕ್ಕಂತಾಗಿದೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *