ಪ್ರಧಾನಿ ಹೆಸರಲ್ಲಿ ನಕಲಿ ಖಾತೆ – ಕೊರೊನಾ ಸೋಂಕಿತರ ನೆರವಿಗೆ ಸ್ವೀಕರಿಸುತ್ತಿರೋ ದೇಣಿಗೆ ಲಪಟಾಯಿಸಲು ಯತ್ನ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರ ನೆರವಿಗೆ ಮುಂದಾಗಿರುವ ಕೇಂದ್ರ ಸರ್ಕಾರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಮುಂದಾಗಿತ್ತು. ಆದರೆ ಕೇಂದ್ರ ಸರ್ಕಾರದ ಮಾದರಿಯಲ್ಲೇ ನಕಲಿ ಖಾತೆ ಸೃಷ್ಟಿಸಿ ಹಣ ಕೊಳ್ಳೆ ಹೊಡೆಯಲು ಪ್ರಯತ್ನಿಸಿದ ಘಟನೆ ನಡೆದಿದೆ.

ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಕೊರೊನಾ ಸೋಂಕು ಪೀಡಿತರ ನೆರವುಗಾಗಿ ಸಾರ್ವಜನಿಕರು ದೇಣಿಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದರು. ದೇಣಿಗೆ ನೀಡುವ ಸಾರ್ವಜನಿಕರು PM Cares Fund ಯುಪಿಐ ಐಡಿ pmcares@sbi ಗೆ ದೇಣಿಗೆ ಸಂದಾಯ ಮಾಡಲು ಮನವಿ ಮಾಡಲಾಗಿತ್ತು.

ಇದೇ ಅವಕಾಶ ಬಳಸಿಕೊಂಡ ಇಬ್ಬರು ಖದೀಮರು PM Cares Fund’ ಯುಪಿಐ ಐಡಿ pmcare@upi  ನಕಲಿ ಖಾತೆಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳಲಾಗಿತ್ತು. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹೋಗಬೇಕಿದ್ದ ಹಣವನ್ನು ಲಪಟಾಯಿಸಲು ಯತ್ನಿಸಲಾಗಿತ್ತು.

ಈ ಪ್ರಕರಣವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಗಮನಿಸಿದ್ದು, ಸಂಬಂಧಿಸಿದವರ ಗಮನಕ್ಕೆ ತಂದಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *