ದೆಹಲಿಯಿಂದ ಬಂದ ಧಾರವಾಡದ ಐವರಿಗೆ ಕೊರೊನಾ ಪರೀಕ್ಷೆ

– ಕುಟುಂಬಸ್ಥರಿಗೆ ಗೃಹ ಬಂಧನ

ಧಾರವಾಡ: ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಧಾರವಾಡ ಜಿಲ್ಲೆಯಲ್ಲಿಯೂ ಐವರು ಪತ್ತೆಯಾಗಿದ್ದು, ಕೊರೊನಾ ಪರೀಕ್ಷೆಗೆ ಒಳಪಡಿಸಿ, ಗೃಹ ಬಂಧನದಲ್ಲಿರಿಸಲಾಗಿದೆ.

ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಈ ಐವರು ಪತ್ತೆಯಾಗಿದ್ದು, ದೆಹಲಿಯ ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಹಲವರಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಐವರನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸದ್ಯ ಈ ಐವರನ್ನು ಅಂಬ್ಯುಲೆನ್ಸ್ ನಲ್ಲಿ ಹುಬ್ಬಳ್ಳಿ ಕಿಮ್ಸ್ ಗೆ ತಂದಿರುವ ನವಲಗುಂದ ತಹಶೀಲ್ದಾರ ನವೀನ ಹುಲ್ಲೂರ ನೇತೃತ್ವದ ತಂಡ, ಐವರ ಮನೆಯವರಿಗೆ 14 ದಿನಗಳ ಕ್ವಾರಂಟೈನ್ ಗೆ ಸೂಚನೆ ನೀಡಲಾಗಿದೆ.

ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ಬಳಿಕ ಇವರು ಆರಾಮಾಗಿ ಓಡಾಡಿಕೊಂಡಿದ್ದರು. ಸದ್ಯ ಇವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲಾಗುತ್ತಿದ್ದು, ಐವರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ.

ನಿಜಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರ ಪೈಕಿ ತೆಲಂಗಾಣದ 6 ಜನ ಸಾವನ್ನಪ್ಪಿದ್ದು, ಕೊರೊನಾ ವೈರಸ್‍ನಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ನಿಜಾಮುದ್ದೀನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಸಭೆಯಲ್ಲಿ ಭಾಗವಹಿಸಿದ್ದ ಹಲವರನ್ನು ಈಗಾಗಲೇ ಪರೀಕ್ಷೆಗೆ ಒಳಪಡಿಸಲಾಗಿದೆ.

Comments

Leave a Reply

Your email address will not be published. Required fields are marked *