ವಕೀಲರು, ಪೊಲೀಸರ ಮಧ್ಯೆ ಮಾರಾಮಾರಿ – ಕಾರುಗಳಿಗೆ ಬೆಂಕಿ, ಕೋರ್ಟ್ ಆವರಣದಲ್ಲಿ ಹೈಡ್ರಾಮಾ

ನವದೆಹಲಿ: ತೀಸ್ ಹಜಾರಿ ನ್ಯಾಯಾಲಯ ಆವರಣದಲ್ಲಿ ಇಂದು ಸಂಜೆ ಹೈಡ್ರಾಮಾ ನಡೆದಿದ್ದು ವಕೀಲರು, ಪೊಲೀಸರ ಮಧ್ಯೆ ಮಾರಾಮಾರಿ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಘಟನೆಯಲ್ಲಿ ಹಲವು ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು, ಒರ್ವ ವಕೀಲರಿಗೆ ಗಂಭೀರ ಗಾಯವಾಗಿದೆ. ಪೊಲೀಸರ ವರ್ತನೆ ಖಂಡಿಸಿ ನೂರಾರು ವಕೀಲರು ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಕಿಯನ್ನು ಹತೋಟಿಗೆ ತರಲು ಈಗಾಗಲೇ 10 ಅಗ್ನಿಶಾಮಕ ವಾಹನಗಳು ನ್ಯಾಯಾಲಯ ಆವರಣಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ಪ್ರಗತಿಯಲ್ಲಿದೆ. ಗಲಾಟೆಯ ಸಂದರ್ಭದಲ್ಲಿ ಗುಂಡಿನ ಶಬ್ದ ಸಹ ಕೇಳಿ ಬಂದಿದೆ.

ಗಾಯಗೊಂಡ ವಕೀಲರನ್ನು ಸೇಂಟ್ ಸ್ಟೀಫನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರನೇ ಬೆಟಾಲಿಯನ್ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ವಕೀಲರು ಆರೋಪಿಸಿದ್ದಾರೆ.

ಪಾರ್ಕಿಂಗ್ ಸಮಸ್ಯೆ ಕುರಿತು ಕೆಲವು ವಕೀಲರು ಮತ್ತು ಪೊಲೀಸ್ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿದ್ದು, ಇದೇ ವಿಷಯ ಹಲ್ಲೆ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ ಎಂದು ವಕೀಲರು ವಿವರಿಸಿದ್ದಾರೆ. ಇಬ್ಬರ ನಡುವಿನ ಗಲಾಟೆಗೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾಯಾಲಯದ ಸಂಕೀರ್ಣದಲ್ಲಿ ಪಾರ್ಕಿಂಗ್ ಸಮಸ್ಯೆ ಕುರಿತು ವಕೀಲರು ಕೋಪಗೊಂಡಿದ್ದಾರೆ. ಪೊಲೀಸರು ಹಾಗೂ ಮಾಧ್ಯಮದವರು ಪ್ರವೇಶಿಸದಂತೆ ಆವರಣದೊಳಗೆ ಬೀಗ ಹಾಕಿದ್ದಾರೆ. ಈ ಕುರಿತು ಪೊಲೀಸರು ಹಾಗೂ ವಕೀಲರ ನಡುವೆ ವಾಗ್ವಾದ ನಡೆದು ಜಗಳಕ್ಕೆ ತಿರುಗಿದೆ ಎಂದು ಮೂಲಗಳು ತಿಳಿಸಿವೆ.

ಉದ್ವಿಗ್ನ ಪರಿಸ್ಥತಿಯನ್ನು ಮನಗಂಡು ನ್ಯಾಯಾಲಯ ಸಂಕೀರ್ಣದ ಎಲ್ಲ ಗೇಟ್‍ಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *