ದೆಹಲಿ ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ವಿಚಾರಣೆ

-ಅಂತ್ಯವಾಗುತ್ತಾ ಕನಕಪುರದ ಬಂಡೆಯ ಸೆರೆಮನೆವಾಸ?

ನವದೆಹಲಿ: ಇಡಿ ಕೋರ್ಟ್ ನೀಡಿದ್ದ ಆದೇಶದ ಪ್ರಶ್ನಿಸಿ ಶುಕ್ರವಾರ ದೆಹಲಿ ಹೈಕೋರ್ಟ್ ಗೆ ಡಿ.ಕೆ.ಶಿವಕುಮಾರ್ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಇಡಿ ಕೋರ್ಟ್ ಆದೇಶ ಪ್ರಶ್ನಿಸಿ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿ ಇಂದು ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ನ್ಯಾ.ಸುರೇಶ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದೆ.

ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ನ್ಯಾಯಂಗ ಬಂಧನದಡಿ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಇಡಿ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಜಾ ಮಾಡಿದೆ. ಕನಕಪುರ ಬಂಡೆ ತಿಹಾರ್ ಜೈಲಿನಲ್ಲೇ ಸೆರೆಮನೆವಾಸ ಅನುಭವಿಸುತ್ತಿದ್ದಾರೆ. ಇಡಿ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದಕ್ಕೆ ಡಿಕೆ ಶಿವಕುಮಾರ್ ಸಹೋದರ ಡಿ.ಕೆ ಸುರೇಶ್ ಜಾಮೀನು ಪಡೆಯುವ ಬಗ್ಗೆ ಕಾನೂನು ಹೋರಾಟ ಮುಂದುವರಿಸಿದ್ದಾರೆ.

ಡಿಕೆಶಿ ಪರ ವಕೀಲರು ಯಾವ ಆಧಾರದ ಮೇಲೆ ಜಾಮೀನು ಕೊಡಲು ಇಡಿ ಕೋರ್ಟ್ ನಿರಾಕರಿಸಿದೆಯೋ ಅದೇ ಆಧಾರಗಳ ಮೇಲೆ ವಾದ ಮಾಡಿ ಜಾಮೀನು ದಕ್ಕಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇಡಿ ಕೋರ್ಟ್ ಜಾಮೀನು ನಿರಾಕರಿಸಲು ಪ್ರಮುಖವಾಗಿ ಮೂರು ಕಾರಣ ಕೊಟ್ಟಿತು. 317 ಖಾತೆಗಳ ಮೂಲಕ ಹಣ ವರ್ಗಾವಣೆ, ಡಿಕೆಶಿ ಪ್ರಭಾವಿಯಾಗಿರೋದು ಮತ್ತು ಪ್ರಕರಣ ತನಿಖಾ ಹಂತದಲ್ಲಿದೆ ಹಾಗಾಗಿ ಜಾಮೀನು ನೀಡೋಕೆ ಸಾಧ್ಯವಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿದೆ. ಇದೇ ಮೂರು ವಿಚಾರಗಳನ್ನು ಇಟ್ಟು ಹೈಕೋರ್ಟ್ ನಲ್ಲಿ ಡಿಕೆಶಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ತಮಗೆ ಸಂಬಂಧ ಇಲ್ಲದ ವಿಚಾರಗಳ ಬಗ್ಗೆ ಇಡಿ ವ್ಯಾಪ್ತಿ ಮೀರಿ ತನಿಖೆ ಮಾಡುತ್ತಿದೆ ಎಂದು ಡಿಕೆ ಪರ ವಕೀಲರು ವಾದಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ನಡೆಯುವ ಜಾಮೀನು ಅರ್ಜಿ ವಿಚಾರಣೆ ವೇಳೆ ಜಾಮೀನು ಸಿಕ್ಕು ಸೆರೆಮನೆ ವಾಸದಿಂದ ಡಿಕೆಶಿಗೆ ಮುಕ್ತಿ ಸಿಗುತ್ತಾ ಅಥವಾ ತಿಹಾರ್ ಜೈಲೆ ಗಟ್ಟಿಯಾಗಿ ಉಳಿದುಕೊಳ್ಳುತ್ತಾರ ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *