ಸಿಬಿಐ ಬೆನ್ನಲ್ಲೇ ಇಡಿ ಸಂಕಷ್ಟ – ತಿಹಾರ್ ಜೈಲಿನಲ್ಲಿ Manish Sisodia ವಿಚಾರಣೆ

ನವದೆಹಲಿ: ಅಬಕಾರಿ ನೀತಿ ಹಗರಣ (Delhi Excise Policy Scam) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಸಿಬಿಐ (CBI) ವಿಚಾರಣೆ ಬೆನ್ನಲ್ಲೇ ಇಡಿ ಅಧಿಕಾರಗಳು ಸಿಸೋಡಿಯಾರಿಂದ ಮಾಹಿತಿ ಪಡೆಯುತ್ತಿದ್ದಾರೆ.

ಇಂದು ಬೆಳಗ್ಗೆ ತಿಹಾರ್ ಜೈಲು (Tihar Jail) ತಲುಪಿದ ಇಡಿ ಅಧಿಕಾರಿಗಳ ತಂಡ, ಮನೀಶ್ ಸಿಸೋಡಿಯಾ ವಿಚಾರಣೆ ಆರಂಭಿಸಿದೆ. ಇದೇ ಪ್ರಕರಣದಲ್ಲಿ ಈಗಾಗಲೇ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಬಂಧಿಸಿ ವಿಚಾರಣೆ ನಡೆಸಿರುವ ಇಡಿ ಈಗ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳುತ್ತಿದೆ. ಇದನ್ನೂ ಓದಿ: ಆಪ್ ನಾಯಕ ಮನೀಶ್ ಸಿಸೋಡಿಯಾ ಜೈಲುಪಾಲು

ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾದ ಮನೀಶ್ ಸಿಸೋಡಿಯಾ ಅವರನ್ನು ಏಳು ದಿನಗಳ ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಸೋಮವಾರ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಅವರನ್ನು ಮಾರ್ಚ್ 20 ರವರೆಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಅರುಣ್ ಯುಕೆ ಟ್ರೇಡ್ ಹೈಕಮಿಷನ್ ಹೈದರಾಬಾದ್ ಜೊತೆಗಿದ್ದರು. ಮತ್ತು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಪುತ್ರಿ, ಸಂಸದೆ ಕೆ. ಕವಿತಾ ಆಪ್ತರೂ ಎನ್ನಲಾಗುತ್ತಿದೆ. ಇದನ್ನೂ ಓದಿ: ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ರಾಜೀನಾಮೆ – ಸೌರಭ್ ಭಾರದ್ವಾಜ್ ಮತ್ತು ಅತಿಶಿಗೆ ಮಂತ್ರಿ ಸ್ಥಾನ?

ಇಡೀ ಬೆಳವಣಿಗೆಗಳ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಬಡವರ ಮಕ್ಕಳು ಶ್ರೀಮಂತರ ಮಕ್ಕಳ ಸರಿಸಮವಾಗಿ ಓದಲು ಶುರು ಮಾಡಿದ್ದಾರೆ. ಅದಕ್ಕೆ ಮನೀಶ್ ಸಿಸೋಡಿಯಾ ಕಾರಣ. ದೇಶದಲ್ಲಿ ಆಸ್ಪತ್ರೆಗಳ ವ್ಯವಸ್ಥೆ ಸರಿ ಇಲ್ಲ. ಆದರೆ ದೆಹಲಿಯಲ್ಲಿ ಮೊಹಲ್ಲಾ‌ ಕ್ಲಿನಿಕ್ ಸ್ಥಾಪಿಸುವ ಬಗ್ಗೆ ವ್ಯವಸ್ಥೆಯನ್ನು ಸತ್ಯೇಂದ್ರ ಜೈನ್ ಬದಲಾಯಿಸಿದರು.

ಸತ್ಯೇಂದ್ರ ಜೈನ್,‌ ಮನೀಶ್ ಸಿಸೋಡಿಯಾ ಮಹಾನ್ ದೇಶ ಭಕ್ತರು, ಅವರು ದೇಶಕ್ಕಾಗಿ ಜೀವ ಕೊಡಲು ಸಿದ್ದವಿದ್ದಾರೆ.‌ ಆದರೆ ಜನಪರ ಕೆಲಸ ಮಾಡುವ ನಾಯಕರನ್ನು ಮೋದಿ ಸರ್ಕಾರ ಜೈಲಿಗೆ ಕಳುಹಿಸಿದೆ. ಇದನ್ನೂ ಖಂಡಿಸಿ, ದೇಶದ ಒಳಿತಿಗಾಗಿ ಹೋಳಿಯ ದಿನದಂದು ಇಡೀ ದಿನ ಪೂಜೆ ಮಾಡುತ್ತಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸಿಬಿಐ ಬಂಧನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮನೀಶ್ ಸಿಸೋಡಿಯಾ

Comments

Leave a Reply

Your email address will not be published. Required fields are marked *