18 ವಾಹನಗಳಿಗೆ ಬೆಂಕಿ ಹಚ್ಚಿದ ಕುಡುಕ- ವಿಡಿಯೋ ವೈರಲ್

ನವದೆಹಲಿ: ದಕ್ಷಿಣ ದೆಹಲಿಯ ಮಧನ್‍ಗಿರಿ ಪ್ರದೇಶದಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ 4 ಕಾರುಗಳು ಸೇರಿ ಒಟ್ಟು 18 ವಾಹನಗಳಿಗೆ ಬೆಂಕಿ ಹಚ್ಚಿದ್ದಾನೆ.

ಆರೋಪಿಯು 25 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಧನ್‍ಗಿರಿಯ ವಸತಿ ಕಟ್ಟಡಗಳ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ, 14 ದ್ವಿಚಕ್ರ ವಾಹನಗಳು ಹಾಗೂ 4 ಕಾರುಗಳನ್ನು ಕುಡಿದ ನಶೆಯಲ್ಲಿ ಆರೋಪಿ ಸುಟ್ಟು ಹಾಕಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತರಾದ ವಿಜಯ್ ಕುಮಾರ್ ತಿಳಿಸಿದ್ದಾರೆ.

ಬೆಂಕಿ ಹಚ್ಚುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ಸದ್ಯ ವೈರಲ್ ಆಗಿದೆ. ವಿಡಿಯೋದಲ್ಲಿ ಆರೋಪಿ ಪಾರ್ಕಿಂಗ್‍ನಲ್ಲಿ ನಿಂತಿದ್ದ ವಾಹನಗಳ ಪೆಟ್ರೋಲ್ ಪೈಪ್‍ಗಳನ್ನು ಕತ್ತರಿಸಿ, ಸೋರುವಂತೆ ಮಾಡಿ, ನಂತರ ಬೆಂಕಿ ಹಚ್ಚಿ ಸುಟ್ಟಿದ್ದಾನೆ.

ವಾಹನಗಳಿಂದ ಪೆಟ್ರೋಲ್ ಸೋರಿಕೆಯಾದ ಹಿನ್ನೆಲೆಯಲ್ಲಿ ಹತ್ತಿರದಲ್ಲಿದ್ದ 6 ಮೋಟರ್ ಬೈಕ್‍ಗಳಿಗೂ ಬೆಂಕಿ ಹತ್ತಿಕೊಂಡಿದೆ. 8 ದ್ವಿಚಕ್ರ ವಾಹನಗಳು ಹಾಗೂ 2 ಕಾರುಗಳು ಬೆಂಕಿಯಿಂದ ಸಂಪೂರ್ಣ ಸುಟ್ಟುಹೊಗಿದ್ದು, 6 ಬೈಕ್ ಮತ್ತು 2 ಕಾರುಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಬೆಳಗಿನ ಜಾವ 3:05 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಘಟನೆ ನಡೆದ ಕೂಡಲೇ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿ, ಹೆಚ್ಚಿನ ದುರಂತ ಆಗುವುದನ್ನು ತಡೆದಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿ ಪೊಲೀಸರು ಆರೋಪಿಯನ್ನು ಹಿಡಿಯುವಷ್ಟರಲ್ಲಿ ಆತ ಪರಾರಿಯಾಗಿದ್ದಾನೆ.

ಸದ್ಯ ಈ ಘಟನೆಯ ದೃಶ್ಯ ಸ್ಥಳಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ವಿರುದ್ಧ ಐಪಿಸಿ 435 ಮತ್ತು 427 ಕಾಯ್ದೆಯ ಅಡಿಯಲ್ಲಿ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *