ನವದೆಹಲಿ: ಕ್ಲುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಕಾಂಗ್ರೆಸ್ ಮುಖಂಡರೊಬ್ಬರನ್ನು ನಡುರಸ್ತೆಯಲ್ಲಿಯೇ ಗುಂಡಿಟ್ಟು ಕೊಲೆಗೈದ ಅಮಾನವೀಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.
43 ವರ್ಷದ ವಿನೋದ್ ಮೆಹ್ರಾ ಕೊಲೆಯಾದ ದುರ್ದೈವಿ. ನಗರದ ಗೀತಾ ಕಾಲೋನಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಮೆಹ್ರಾ ಕೊಲೆಯಾಗಿದ್ದಾರೆ.

ಮದುವೆ ಕಾರ್ಯಕ್ರಮ ಮುಗಿಸಿ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಜಿಟಿಕೆ ರಸ್ತೆಯಲ್ಲಿ ಮೆಹ್ರಾ ಅವರು ಚಲಿಸುತ್ತಿದ್ದ ವ್ಯಾಗನಾರ್ ಮತ್ತು ಮಾರುತಿ ಇಕೋ ವಾಹನ ಚಾಲಕನ ಜೊತೆ ಸಣ್ಣ ವಾಗ್ವಾದ ನಡೆದಿತ್ತು. ಓವರ್ ಟೇಕ್ ಮಾಡಲು ಮಾರುತಿ ಇಕೋ ಕಾರನ್ನು ಅತೀ ವೇಗವಾಗಿ ಚಲಾಯಿಸಿದ್ದನು. ಮೆಹ್ರಾ ಇದನ್ನು ವಿರೋಧಿಸಿದ್ದಾರೆ. ಪರಿಣಾಮ ಇವರಿಬ್ಬರ ಮಧ್ಯೆ ನಡುರಸ್ತೆಯಲ್ಲಿಯೇ ಕಾರುಗಳನ್ನು ನಿಲ್ಲಿಸಿ ಮಾತಿನ ಚಕಮಕಿ ನಡೆದಿದೆ.

ಇಬ್ಬರೂ ತಮ್ಮ ವಾಹನಗಳನ್ನು ಭಾಲಸ್ವಾ ಎಂಬಲ್ಲಿ ಫ್ಲೈ ಓವರ್ ಮೇಲೆ ನಿಲ್ಲಿಸಿ, ಮಾತನ ಚಕಮಕಿ ನಡೆಸಿದ್ದಾರೆ. ಈ ವೇಳೆ ಕೂಡಲೇ ಇನ್ನೊಂದು ಕಾರಿನಲ್ಲಿದ್ದ ವ್ಯಕ್ತಿ ಕಾರಿನಿಂದ ಗನ್ ತೆಗೆದುಕೊಂಡು ಬಂದು ಮೆಹ್ರಾ ಅವರ ಮೇಲೆ ಗುಂಡು ಹಾರಿಸಿದ್ದಾನೆ.

ಪರಿಣಾಮ ಗುಂಡು ಮೆಹ್ರಾ ಅವರ ಎಡಗಡೆಯ ಹೃದಯ ಭಾಗಕ್ಕೆ ಹೊಕ್ಕಿದ್ದು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳಿಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಮೆಹ್ರಾ ಅದಾಗಲೇ ಮೃತಪಟ್ಟಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಘಟನೆಯ ವೇಳೆ ಮೆಹ್ರಾ ಅವರ ಸಹೋದರನ ಮಗ ಮತ್ತು ಆತನ ಟೀಚರೊಬ್ಬರು ಮಾತ್ರ ಜೊತೆಗಿದ್ದನು.
ಸದ್ಯ ಘಟನೆ ಸಂಬಂಧಿಸಿದಂತೆ ಪೊಲೀಸರು ಹೆದಾರಿಯಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರೆಸಿದ್ದಾರೆ.

Leave a Reply