Loksabha Election: ದೆಹಲಿಯಲ್ಲಿ ಕಾಂಗ್ರೆಸ್‌, ಎಎಪಿ ನಡುವೆ ಸೀಟು ಹಂಚಿಕೆ ಫೈನಲ್‌

ನವದೆಹಲಿ: ಈ ಬಾರಿಯ ಲೋಕಸಭಾ ಚುನಾವಣೆಯು (Loksabha Election 2024) ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ನಡುವೆ ಚುನಾವಣೆಗೆ ದೆಹಲಿಯಲ್ಲಿ ಎಎಪಿ (AAP) ಮತ್ತು ಕಾಂಗ್ರೆಸ್ (Congress) ನಡುವೆ ಸೀಟು ಹಂಚಿಕೆ ಅಂತಿಮವಾಗಿದೆ.

ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ (Mukul Wasnik), ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಆಮ್‌ ಆದ್ಮಿ ಪಕ್ಷವು 4 ಹಾಗೂ ಕಾಂಗ್ರೆಸ್‌ 3 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ನವದೆಹಲಿ, ಪಶ್ಚಿಮ ದೆಹಲಿ, ದಕ್ಷಿಣ ದೆಹಲಿ ಮತ್ತು ಪೂರ್ವ ದೆಹಲಿಯಲ್ಲಿ ಎಎಪಿ ಸ್ಪರ್ಧೆ ಮಾಡಲಿದ್ದು, ಚಾಂದಿನಿ ಚೌಕ್‌, ಈಶಾನ್ಯ ದೆಹಲಿ ಮತ್ತು ವಾಯುವ್ಯ ದೆಹಲಿಯಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ನಾನು ರಾಜಕಾರಣಿಯಾಗಿ ಹುಟ್ಟಿಲ್ಲ, ರಾಜಕಾರಣಿಯಾಗಿ ಸಾಯಲ್ಲ: ಅನಂತ್ ಕುಮಾರ್ ಹೆಗಡೆ

ಗುಜರಾತ್‌ನಲ್ಲಿ ಕಾಂಗ್ರೆಸ್ 24 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, ಎಎಪಿಯು ಭಾವನಗರ ಮತ್ತು ಭರೂಚ್ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದೆ. ಚಂಡೀಗಢದಲ್ಲಿ ಮತ್ತು ಗೋವಾದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಪಂಜಾಬ್‌ಗೆ ಯಾವುದೇ ಸೀಟು ಹಂಚಿಕೆ ಒಪ್ಪಂದವನ್ನು ಘೋಷಿಸಲಾಗಿಲ್ಲ. ಆದರೆ ಎಎಪಿ ಅಲ್ಲಿನ ಎಲ್ಲಾ 13 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮೊದಲೇ ಹೇಳಿತ್ತು. ಎಎಪಿ ಮತ್ತು ಕಾಂಗ್ರೆಸ್ ಎರಡೂ ತಮ್ಮ ತಮ್ಮ ಚಿಹ್ನೆಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲಿವೆ. ಮೈತ್ರಿಗೆ ದೇಶ ಮುಖ್ಯ ಮತ್ತು ಯಾವುದೇ ಪಕ್ಷವಲ್ಲ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಗುತ್ತಿದೆ. ರೈತರು ದೌರ್ಜನ್ಯ ಎದುರಿಸುತ್ತಿದ್ದಾರೆ. ನಾವು ಬಿಜೆಪಿಯ ತಂತ್ರವನ್ನು ಬುಡಮೇಲು ಮಾಡುತ್ತೇವೆ. ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ನಾವು ಇಂಡಿಯಾ ಒಕ್ಕೂಟದ ಅಡಿಯಲ್ಲಿ ಜಂಟಿಯಾಗಿ ಹೋರಾಡುತ್ತೇವೆ ಎಂದು ವಾಸ್ನಿಕ್ ಹೇಳಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ನ ವಾಸ್ನಿಕ್, ಅರವಿಂದರ್ ಸಿಂಗ್ ಲವ್ಲಿ ಮತ್ತು ದೀಪಕ್ ಬಬಾರಿಯಾ ಉಪಸ್ಥಿತರಿದ್ದರು. ಎಎಪಿಯನ್ನು ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಸಂದೀಪ್ ಪಾಠಕ್ ಪ್ರತಿನಿಧಿಸಿದ್ದರು.ʼ