ದೆಹಲಿ ಸಿಎಂಗೆ ಕಪಾಳಮೋಕ್ಷ ಕೇಸ್ – ಆರೋಪಿಯನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್

– ಹಲ್ಲೆ ಬಳಿಕ ರೇಖಾಗುಪ್ತಾ ಮೊದಲ ಫೋಟೋ ರಿಲೀಸ್
– ರೇಖಾ ಗುಪ್ತಾಗೆ ಝೆಡ್ ಪ್ಲಸ್ ಭದ್ರತೆ

ನವದೆಹಲಿ: ಮುಖ್ಯಮಂತ್ರಿ ರೇಖಾ ಗುಪ್ತಾ (CM Rekha Gupta) ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಯನ್ನು ಐದು ದಿನ ಪೊಲೀಸ್ ಕಸ್ಟಡಿಗೆ  (Police Custody) ನೀಡಿದೆ.

ಈ ಕುರಿತು ಸಿವಿಲ್ ಲೈನ್ (C ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 109(1), 132 ಮತ್ತು 221ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬುಧವಾರವೇ (ಆ.20) ಆರೋಪಿಯನ್ನು ಬಂಧಿಸಲಾಗಿದೆ. ಗುರುವಾರ (ಆ.21) ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.ಇದನ್ನೂ ಓದಿ: ಜಿಎಸ್‌ಟಿ ಪರಿಷ್ಕರಣೆ – 12%, 28% ಸ್ಲ್ಯಾಬ್‌ ತೆಗೆಯಲು ಸಚಿವರ ಸಮಿತಿ ಒಪ್ಪಿಗೆ

ಹಲ್ಲೆ ಬಳಿಕ ರೇಖಾ ಗುಪ್ತಾ ಮೊದಲ ಫೋಟೋ ರಿಲೀಸ್:
ಬಿಜೆಪಿಯ 7 ಎಂಪಿಗಳು ಗುರುವಾರ (ಆ.21) ಸಿಎಂ ರೇಖಾ ಗುಪ್ತಾ ಅವರನ್ನು ಭೇಟಿಯಾಗಿ, ಯೋಗಕ್ಷೇಮ ವಿಚಾರಿಸಿದರು. ಈ ಕುರಿತು ಬಿಜೆಪಿ ಎಂಪಿ ಪ್ರವೀಣ್ ಖಂಡೇವಾಲಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸಿಎಂ ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಮೊದಲಿನಂತೆಯೇ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಹಲ್ಲೆ ಬಳಿಕ ಸಿಎಂ ರೇಖಾ ಗುಪ್ತಾ ಅವರ ಮೊದಲ ಫೋಟೋ ರಿಲೀಸ್ ಮಾಡಿದ್ದಾರೆ.

ಸಿಎಂ ರೇಖಾ ಗುಪ್ತಾಗೆ ಝೆಡ್ ಶ್ರೇಣಿಯ ವಿಐಪಿ ಭದ್ರತೆ
ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಅವರಿಗೆ `ಝೆಡ್’ ಶ್ರೇಣಿಯ ವಿಐಪಿ ಭದ್ರತೆಯನ್ನು ಒದಗಿಸಿದೆ. ಗುಪ್ತಾ ಅವರ ಅಧಿಕೃತ ನಿವಾಸದಲ್ಲಿ ಅರೆಸೈನಿಕ ಪಡೆಯ ವಿಐಪಿ ಸೆಕ್ಯೂರಿಟಿ ಗ್ರೂಪ್‌ನ ಭದ್ರತೆ ಒದಗಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ದೆಹಲಿ ಮುಖ್ಯಮಂತ್ರಿಯ ಭದ್ರತೆಯ ಹೊಣೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ವಹಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

ದಿನದ 24 ಗಂಟೆಯೂ 22ರಿಂದ 25 ಸಶಸ್ತ್ರ ಕಮಾಂಡೊಗಳ ತಂಡವು ಮುಖ್ಯಮಂತ್ರಿಯ ಭದ್ರತೆಯಲ್ಲಿ ನಿರತವಾಗಿರಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬಕ್ಕೂ ಇದೇ ಪಡೆಯು ಭದ್ರತೆಯನ್ನು ಒದಗಿಸುತ್ತಿದೆ.

ಏನಿದು ಪ್ರಕರಣ?
ಗುಜರಾತ್‌ನ ರಾಜ್‌ಕೋಟ್ ನಿವಾಸಿಯಾಗಿರುವ ಸಕಾರಿಯಾ ಬೆಳಗ್ಗೆ 7:30ಕ್ಕೆ ದೆಹಲಿ ಮುಖ್ಯಮಂತ್ರಿಗಳ ಕಚೇರಿ ಕೆಲಸಕ್ಕೆ ಬಂದಿದ್ದ. ಈತ ತಿಹಾರ್ ಜೈಲಿನಲ್ಲಿದ್ದ ತನ್ನ ಸಂಬಂಧಿಕರೊಬ್ಬರನ್ನ ಬಿಡುಗಡೆ ಮಾಡಿಸುವಂತೆ ಸಿಎಂಗೆ ಮನವಿ ಕೊಡಲು ಬಂದಿದ್ದ. ನ್ಯಾಯಾಲಯಕ್ಕೆ ಸಂಬಂಧಪಟ್ಟ ದಾಖಲೆಯನ್ನೂ ತಂದಿದ್ದ. ಮನವಿ ಕೊಡಲು ಬಂದಾಗ ಏಕಾಏಕಿ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದ ವ್ಯಕ್ತಿಯನ್ನ 41 ವರ್ಷದ ರಾಜೇಶ್ ಭಾಯಿ ಖಿಮ್ಜಿ ಭಾಯಿ ಸಕರಿಯಾ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಎಎಸ್ಪಿ ಕಾರಿಗೆ ಡಿಕ್ಕಿ – ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್