ಆರ್‌ಸಿಬಿಗೆ ಡೆಲ್ಲಿ ತಂಡದಿಂದ ಕನ್ನಡದಲ್ಲಿ ಸೆಲ್ಯೂಟ್

ಬೆಂಗಳೂರು: ಐಪಿಎಲ್ 2019ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಪ್ಲೇ ಆಫ್‍ಗೆ ಅರ್ಹತೆ ಪಡೆಯದೇ ಇದ್ದರೂ ಅಭಿಮಾನಿಗಳು ತಂಡಕ್ಕೆ ಬೆಂಬಲ ನೀಡಿದ್ದರು. ಈಗ ದೆಹಲಿ ಕ್ಯಾಪಿಟಲ್ಸ್ ತಂಡ ಕನ್ನಡದಲ್ಲೇ ಟ್ವೀಟ್ ಮಾಡಿ ಆರ್‌ಸಿಬಿಗೆ ಸೆಲ್ಯೂಟ್ ಮಾಡಿದೆ.

ಈ ಬಾರಿ ಐಪಿಎಲ್‍ನಲ್ಲಿ ದೆಹಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ಲೇ ಆಫ್ ತಲುಪಿತು. ಬಳಿಕ ಎಲಿಮಿನೇಟರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರ ನಡೆದಿತ್ತು.

ಈಗ ಡೆಲ್ಲಿ ತಂಡದ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿಯ ಫೋಟೋ ಹಾಕಿ ಆರ್‌ಸಿಬಿ ತಂಡದ ಬಗ್ಗೆ ಕನ್ನಡದಲ್ಲಿ ಟ್ವೀಟ್ ಮಾಡಿದೆ. “ಈ ಸೀಸನ್‍ನಲ್ಲಿ, ಮೈದಾನದಲ್ಲಿ ನೀವು ನಮ್ಮೆದುರು ತೋರಿಸಿದ ಕೆಚ್ಚೆದೆಯ ಆಟಕ್ಕೆ ಮತ್ತು ದಿಟ್ಟ ಹೋರಾಟಕ್ಕೆ ಒಂದು ಸೆಲ್ಯೂಟ್ ಎಂದು ಕನ್ನಡದಲ್ಲಿ ಬರೆದಿದ್ದಾರೆ. ಅಲ್ಲದೆ 2 ಪಂದ್ಯ, ಲೆಕ್ಕವಿಲ್ಲದಷ್ಟು ನೆನಪುಗಳು. ಆರ್‌ಸಿಬಿ ತಂಡ ನಮ್ಮ ವಿರುದ್ಧ ಬೋಲ್ಡ್ ಹಾಗೂ ಚಾಲೆಂಜಿಂಗ್ ಪಂದ್ಯ ಆಡಿದೆ” ಎಂದು ಟ್ವೀಟ್ ಮಾಡಿದೆ.

ದೆಹಲಿ ಕ್ಯಾಪಿಟಲ್ಸ್ ಮಾಡಿದ ಈ ಟ್ವೀಟ್‍ಗೆ ಕನ್ನಡಿಗರು ರೀ-ಟ್ವೀಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಮುಂದಿನ ಐಪಿಎಲ್ ಸೀಸನ್‍ಗೆ ದೆಹಲಿ ತಂಡಕ್ಕೆ ಶುಭ ಕೋರಿದೆ. ಈ ಟ್ವೀಟ್‍ಗೆ ಇದುವರೆಗೂ 400ಕ್ಕೂ ಹೆಚ್ಚು ರೀ-ಟ್ವೀಟ್ ಹಾಗೂ 2,000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ಆರ್‌ಸಿಬಿ 14 ಪಂದ್ಯದಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 8 ಪಂದ್ಯದಲ್ಲಿ ಸೋಲು ಕಂಡಿತ್ತು. ಆರ್‌ಸಿಬಿ 11 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ದೆಹಲಿ ತಂಡ 14 ಪಂದ್ಯದಲ್ಲಿ 9 ಪಂದ್ಯಗಳನ್ನು ಗೆದ್ದು, 5 ಪಂದ್ಯದಲ್ಲಿ ಸೋತಿತ್ತು.

Comments

Leave a Reply

Your email address will not be published. Required fields are marked *