ದೆಹಲಿ ಬಜೆಟ್ ಮಂಡಿಸಿದ ಸಿಎಂ ರೇಖಾ ಗುಪ್ತಾ – ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ.

ನವದೆಹಲಿ: ದೆಹಲಿಯಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಸರ್ಕಾರವು 26 ವರ್ಷಗಳ ನಂತರ ದೆಹಲಿ ವಿಧಾನಸಭೆಯಲ್ಲಿ ತನ್ನ ಮೊದಲ ಬಜೆಟ್ (Delhi Budget) ಅನ್ನು ಮಂಗಳವಾರ ಮಂಡಿಸಿತು.

2025-26 (FY26) ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಿದ ದೆಹಲಿ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವೆ ರೇಖಾ ಗುಪ್ತಾ, ಅರ್ಹ ಮಹಿಳೆಯರಿಗೆ ತಿಂಗಳಿಗೆ 2,500 ಪಾವತಿಸಲು ಸರ್ಕಾರ 5,100 ಕೋಟಿ ಹಣವನ್ನು ನಿಗದಿಪಡಿಸಿದೆ ಎಂದು ತಿಳಿಸಿದ್ದಾರೆ.

ಒಟ್ಟು 1 ಟ್ರಿಲಿಯನ್ ವೆಚ್ಚದಲ್ಲಿ, ದೆಹಲಿ ಬಜೆಟ್ 2025 ಹಿಂದಿನ ಬಜೆಟ್‌ಗಿಂತ ಶೇ. 31.5 ರಷ್ಟು ಹೆಚ್ಚಳ ಕಂಡಿದೆ. FY26 ರ ಬಂಡವಾಳ ವೆಚ್ಚವನ್ನು ದ್ವಿಗುಣಗೊಳಿಸಿ 28,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ 2,144 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಗುಪ್ತಾ ಹೇಳಿದ್ದಾರೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ದೆಹಲಿಯ ಜನರಿಗೆ ಈಗ 10 ಲಕ್ಷ ರೂ. ವಿಮಾ ರಕ್ಷಣೆ ಸಿಗಲಿದೆ. ಕೇಂದ್ರದ 5 ಲಕ್ಷ ರೂ. ವಿಮಾ ರಕ್ಷಣೆಯ ಜೊತೆಗೆ, ದೆಹಲಿಯ ಜನರಿಗೆ 5 ಲಕ್ಷ ಟಾಪ್-ಅಪ್ ನೀಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ದೆಹಲಿ-ಎನ್‌ಸಿಆರ್ ಒಳಗೆ ಸಾರಿಗೆ ಸಂಪರ್ಕವನ್ನು ಸುಧಾರಿಸಲು ದೆಹಲಿ ಸರ್ಕಾರ 1,000 ಕೋಟಿ ರೂ. ಹಂಚಿಕೆ ಮಾಡಿದೆ. ಇದನ್ನು ಐತಿಹಾಸಿಕ ಬಜೆಟ್ ಎಂದು ಕರೆದ ಸಿಎಂ ಗುಪ್ತಾ, ರಸ್ತೆಗಳು, ಒಳಚರಂಡಿ ವ್ಯವಸ್ಥೆಗಳು ಮತ್ತು ನೀರು ಸರಬರಾಜು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹತ್ತು ಕ್ಷೇತ್ರಗಳಿಗೆ ಗಮನ ಹರಿಸಿದೆ ಎಂದು ತಿಳಿಸಿದ್ದಾರೆ.