ದೆಹಲಿಯ ಬಾಬರ್ ರಸ್ತೆ ನಾಮಫಲಕಕ್ಕೆ ಕಪ್ಪು ಬಣ್ಣ- ಹೆಸರು ಬದಲಾಯಿಸುವಂತೆ ಹಿಂದೂ ಸೇನೆ ಒತ್ತಾಯ

ನವದೆಹಲಿ: ಸೆಂಟ್ರಲ್ ದೆಹಲಿಯ ಹೈ ಸೆಕ್ಯೂರಿಟಿ ವಲಯದಲ್ಲಿನ ಬಾಬರ್ ರಸ್ತೆಯ ನಾಮಫಲಕಕ್ಕೆ ಹಿಂದೂ ಸೇನೆಯ ಸದಸ್ಯರು ಕಪ್ಪು ಬಣ್ಣ ಬಳಿದಿದ್ದು, ರಸ್ತೆಯ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ದೆಹಲಿಯ ಹೃದಯ ಭಾಗದಲ್ಲಿ ಪ್ರಸಿದ್ಧ ಕೊನಾಟ್‍ನ ಹತ್ತಿರವಿರುವ ರಸ್ತೆಗೆ ಮೊಘಲ್ ರಾಜವಂಶದ ಮೊದಲ ಚಕ್ರವರ್ತಿ ಬಾಬರ್ ಹೆಸರನ್ನು ಇಡಲಾಗಿದೆ. ಇದಕ್ಕೆ ಹಿಂದೂ ಸೇನೆ ಆಕ್ರೋಶ ವ್ಯಕ್ತಪಡಿಸಿದ್ದು, ಸೇನೆಯ ಸದಸ್ಯರು ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ. ಈ ರಸ್ತೆಗೆ ಬಾಬರ್ ಎಂಬ ಹೆಸರ ಬದಲಾಗಿ ಶ್ರೇಷ್ಠ ಭಾರತೀಯ ವ್ಯಕ್ತಿಯ ಹೆಸರಿಡುವಂತೆ ಆಗ್ರಹಿಸಿದ್ದಾರೆ.

ಹೆಸರು ಬದಲಾವಣೆ ಆಗ್ರಹಿಸಿ ದೆಹಲಿಯ ಮುನ್ಸಿಪಲ್ ಕೌನ್ಸಿಲ್‍ನ ರಸ್ತೆಯ ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದೇವೆ ಎಂದು ಹಿಂದೂ ಸೇನಾ ಅಧ್ಯಕ್ಷ ವಿಷ್ಣು ಗುಪ್ತಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಈ ಕುರಿತು ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ರಸ್ತೆಯ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಎನ್‍ಡಿಎಂಸಿಯ ಅಧಿಕಾರಿಗಳು ಸಹ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ.

ಹೆಚ್ಚು ಮರಗಳಿಂದ ಕೂಡಿದ್ದ ರಸ್ತೆಗಳಲ್ಲಿ ಒಂದಾದ ಅಕ್ಬರ್ ರಸ್ತೆಯನ್ನು ಈ ಹಿಂದೆ ಮರುನಾಮಕರಣ ಮಾಡಿ ಸಂಕ್ಷಿಪ್ತಗೊಳಿಸಲಾಗಿತ್ತು. ಅಕ್ಬರ್ ಎಂದಿದ್ದ ನಾಮಫಲಕದ ಮೇಲೆಯೇ ‘ಮಹಾರಾಣಾ ಪ್ರತಾಪ್ ರಸ್ತೆ’ ಎಂದು ಬರೆಯಲಾಗಿತ್ತು. ಹಳದಿ ಹಾಗೂ ಗುಲಾಬಿ ಬಣ್ಣದ ಪೋಸ್ಟರ್‍ನ್ನು ಹಾಕಲಾಗಿತ್ತು. ಪೊಲೀಸ್ ಮೇಲ್ವಿಚಾರಣೆ ನಂತರ ಈ ಪೋಸ್ಟರ್ ಗಳನ್ನು ತೆಗೆದುಹಾಕಲಾಗಿತ್ತು.

ಬಾಬರ್ ಮಗ ಮೊಘಲ್ ಚಕ್ರವರ್ತಿ ಅಕ್ಬರ್ ಹೆಸರಿನ ಈ ರಸ್ತೆಯಲ್ಲಿ ದೇಶದ ಹಲವು ಉನ್ನತ ರಾಜಕಾರಣಿಗಳ ಮನೆಯಿದ್ದು, ಕಾಂಗ್ರೆಸ್ ಪ್ರಧಾನ ಕಚೇರಿಯೂ ಸಹ ಇದೇ ರಸ್ತೆಯಲ್ಲಿದೆ. 2015ರಲ್ಲಿ ಅಕ್ಬರ್‍ನ ಮೊಮ್ಮಗ ಔರಂಗಜೇಬನ ಹೆಸರಿನ ಮತ್ತೊಂದು ಪ್ರಮುಖ ರಸ್ತೆಯನ್ನು ಹೆಸರನ್ನು ಸಹ ಮರುನಾಮಕರಣ ಮಾಡಲಾಗಿತ್ತು.

ಔರಂಗಜೇಬ್ ರಸ್ತೆಗೆ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬುಲ್ ಕಲಾಂ ಹೆರಸನ್ನು ಮರುನಾಮಕರಣ ಮಾಡಲಾಗಿತ್ತು. ಇದರ ಮುಂದಿನ ವರ್ಷ ಪ್ರಧಾನ ಮಂತ್ರಿ ರಸ್ತೆ, ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿತ್ತು.

Comments

Leave a Reply

Your email address will not be published. Required fields are marked *