ದೆಹಲಿಯಲ್ಲಿ ಫೆ.8ಕ್ಕೆ ಚುನಾವಣೆ, 11ಕ್ಕೆ ಫಲಿತಾಂಶ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ದೆಹಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದು, ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ.

ದೆಹಲಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಫೆ.8 ಶನಿವಾರ ಚುನಾವಣೆ ಮತದಾನ ನಡೆದರೆ ಫೆ.11 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯ ದಿನಾಂಕ ಘೋಷಣೆ ಆಗಿರುವುದರಿಂದ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ.

ಚುನಾವಣೆಯಲ್ಲಿ ದೆಹಲಿಯ 1.46 ಕೋಟಿ ಮಂದಿ ಮತದಾನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇದರಲ್ಲಿ 80.55 ಲಕ್ಷ ಪುರುಷರು ಹಾಗೂ 66.35 ಲಕ್ಷ ಮಂದಿ ಮಹಿಳೆಯರಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮಾಹಿತಿ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ 7 ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ದೆಹಲಿ ರಾಜ್ಯದ ಪ್ರಮುಖ ಪಕ್ಷಗಳಾದ ಆಡಳಿತರೂಢ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈಗಾಗಲೇ ಚುನಾವಣಾ ಸಿದ್ಧತೆಗಳನ್ನು ಆರಂಭಿಸಿದೆ.

ಫೆ.22ಕ್ಕೆ ದೆಹಲಿ ವಿಧಾನಸಭೆಯ ಅವಧಿ ಅಂತ್ಯವಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ ಎಎಪಿ ಬರೋಬ್ಬರಿ 67 ಸ್ಥಾನ ಹಾಗೂ ಬಿಜೆಪಿ 3 ಸ್ಥಾನ ಪಡೆದಿತ್ತು. ಕಾಂಗ್ರೆಸ್ ಪಕ್ಷ 1 ಸ್ಥಾನವನ್ನು ಪಡೆಯಲು ಕೂಡ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿಯಲ್ಲಿ ಹೆಚ್ಚಿನ ಪ್ರಚಾರ ನಡೆಸುವ ಸಾಧ್ಯತೆ ಇದೆ. ಆದರೆ ದೆಹಲಿಯ ಜನ ಕಳೆದ ಬಾರಿ ದೇಶದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಅರವಿಂದ್ ಕೇಜ್ರಿವಾಲ್ ಆಡಳಿತ ಇರಲಿ ಎಂದು ನಿರ್ಧರಿಸಿದಂತೆ ಇದ್ದರು. ಆದರೆ ಈ ಬಾರಿ ಕೇಂದ್ರ ಸರ್ಕಾರ ಸಿಎಎ ಹಾಗೂ ಎನ್‍ಆರ್ ಸಿಯನ್ನು ಜಾರಿ ಮಾಡಿರುವುದು ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಇತ್ತ ಹಾಲಿ ಸಿಎಂ ಕೇಜ್ರಿವಾಲ್ ಅವರು ಸರ್ಕಾರ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ನೀಡಿದ್ದಾರೆ. ಅಲ್ಲದೇ ದೆಹಲಿ ಉತ್ತಮ ಆಡಳಿತ ನೀಡಿದ್ದೇವೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *