30 ಬಸ್ಕಿ ಹೊಡೆದ್ರೆ ರೈಲ್ವೇ ಪ್ಲಾಟ್‍ಫಾರಂ ಟಿಕೆಟ್ ಫ್ರೀ

ನವದೆಹಲಿ: ದೇಶಾದ್ಯಂತ ಫಿಟ್ ಇಂಡಿಯಾ ಉತ್ತೇಜಿಸಲು ಕೇಂದ್ರ ಸರ್ಕಾರ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇದರ ಭಾಗವಾಗಿ 30 ಬಸ್ಕಿ ಹೊಡೆದರೆ ಫ್ರೀ ಪ್ಲಾಟ್‍ಫಾರಂ ಟಿಕೆಟ್ ನೀಡುವ ಯೋಜನೆಯನ್ನು ದೆಹಲಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.

ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಬಸ್ಕಿ ಹೊಡೆದರೆ ಉಚಿತವಾಗಿ ಪ್ಲಾಟ್‍ಫಾರಂ ಟಿಕೆಟ್ ಕೊಡುವಂತಹ ಮೆಷಿನ್‍ನ್ನು ಇರಿಸಲಾಗಿದೆ. ಈ ಮಷಿನ್ ಮುಂದೆ 3 ನಿಮಿಷದಲ್ಲಿ 30 ಬಸ್ಕಿ ಹೊಡೆದರೆ ಅದು ಫ್ರೀಯಾಗಿ ಟಿಕೆಟ್ ಕೊಡುತ್ತದೆ.

ಪ್ರಯಾಣಿಕರೊಬ್ಬರು ಫ್ರೀ ಟಿಕೆಟ್ ಪಡೆಯುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿರು ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಫಿಟ್‍ನೆಸ್‍ನೊಂದಿಗೆ ಉಳಿತಾಯ. ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಫಿಟ್‍ನೆಸ್ ಉತ್ತೇಜಿಸಲು ಒಂದು ವಿಶಿಷ್ಟ ಪ್ರಯೋಗವನ್ನು ಮಾಡಲಾಗಿದೆ. ಇಲ್ಲಿ ಇರಿಸಲಾದ ಯಂತ್ರದ ಮುಂದೆ ಬಸ್ಕಿ ಹೊಡೆದರೆ ಪ್ಲಾಟ್‍ಫಾರಂ ಟಿಕೆಟ್‍ಗಳನ್ನು ಉಚಿತವಾಗಿ ತೆಗೆದುಕೊಳ್ಳಬಹುದು ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸದೃಢ ಭಾರತವನ್ನು ರೂಪಿಸುವ ಜೊತೆಗೆ ಭಾರತದ ನಾಗರಿಕರ ಆರೋಗ್ಯದ ಕಾಳಜಿಯಿಂದ ಫಿಟ್ ಇಂಡಿಯಾ ಯೋಜನೆ ಜಾರಿಗೆ ತಂದಿದ್ದಾರೆ. ಅದರ ಭಾಗವಾಗಿ ಪಿಯೂಷ್ ಗೋಯೆಲ್ ಅವರು ಫ್ರೀ ಪ್ಲಾಟ್‍ಫಾರಂ ಟಿಕೆಟ್ ಯೋಜನೆ ಜಾರಿಗೆ ತಂದಿದ್ದಾರೆ.

ನೂತನ ಯೋಜನೆ ಈಗಾಗಲೇ ದೆಹಲಿಯಲ್ಲಿ ಜಾರಿಗೆ ಬಂದಿದ್ದು, ಶೀಘ್ರದಲ್ಲಿಯೇ ದೇಶದ ಇತರೆ ರೈಲ್ವೆ ನಿಲ್ದಾಣದಲ್ಲಿ ಯಂತ್ರವನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೆ ಸಚಿವರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *