ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ಜೊತೆಗೆ ದೆಹಲಿಯಲ್ಲಿ ಕೊರೊನಾಗೆ ಮೊದಲ ಸಾವು ದಾಖಲಾಗಿದೆ.

ದೆಹಲಿಯ 68 ವರ್ಷದ ಮಹಿಳೆಗೆ ವಿದೇಶದಿಂದ ಮರಳಿದ್ದ ಪುತ್ರನಿಂದ ಕೊರೊನಾ ಸೋಂಕು ಹರಡಿತ್ತು. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‌ಎಂಎಲ್‌) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ.

ಕಲಬುರಗಿಯಲ್ಲಿ ಮಾರ್ಚ್ 11ರಂದು ಮೃತಪಟ್ಟ 76 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ತಗಲಿದ್ದನ್ನು ಗುರುವಾರ ರಾತ್ರಿ ಆರೋಗ್ಯ ಸಚಿವ ಶ್ರೀರಾಮುಲು ಖಚಿತಪಡಿಸಿದ್ದರು. ಈ ಮೂಲಕ ಭಾರತದಲ್ಲಿ ಕೊರೊನಾ ಮೊದಲ ಬಲಿ ಪಡೆದಂತಾಗಿತ್ತು.

ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದ ಸಚಿವರು, ಕಲಬುರಗಿ ವೃದ್ಧನ ಲ್ಯಾಬ್ ರಿಪೋರ್ಟ್ ಈಗಷ್ಟೇ ನಮ್ಮ ಕೈಸೇರಿದೆ. ವರದಿಯಲ್ಲಿ ಕೊರೊನಾ ವೈರಸ್‍ನಿಂದಲೇ ಸಾವನ್ನಪ್ಪಿದ್ದಾರೆ ಎನ್ನುವುದು ದೃಢಪಟ್ಟಿದೆ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೃದ್ಧನ ಸಾವನ್ನು ಖಚಿತಪಡಿಸಿದ್ದರು.

ಕಲಬುರಗಿಯ ಬೆನ್ನಲ್ಲೇ ದೆಹಲಿಯಲ್ಲಿ ಕೊರೊನಾ ಬಲಿ ಪಡೆದಿದೆ. ಕರ್ನಾಟಕದಲ್ಲಿ ಕೊರೊನಾ ಶಂಕಿತರ ಸಂಖ್ಯೆ 32ಕ್ಕೆ ಏರಿದ್ದು, ಇಂದು ಒಂದೇ ದಿನ 19 ಮಂದಿ ದಾಖಲಾಗಿದ್ದಾರೆ. ಗುರುವಾರ ಮೃತಪಟ್ಟ ವ್ಯಕ್ತಿ ಸೇರಿದಂತೆ ಒಟ್ಟು 6 ಮಂದಿಗೆ ಕೊರೊನಾ ಬಂದಿದ್ದು, ಇಂದು ಹೊಸದಾಗಿ ಯಾವುದೇ ಕೇಸ್ ಪತ್ತೆಯಾಗಿಲ್ಲ. 5 ಮಂದಿ ಕೊರೊನಾ ಪೀಡಿತರ ಆರೋಗ್ಯ ಸ್ಥಿರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಕಲಬುರಗಿ, ದಕ್ಷಿಣ ಕನ್ನಡ, ಹಾಸನದಲ್ಲಿ ನಾಲ್ಕು ಮಂದಿ, ಬೆಂಗಳೂರಿನಲ್ಲಿ 3, ಉಡುಪಿಯಲ್ಲಿ 2, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ತಲಾ ಒಬ್ಬರು ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 3 ಮಂದಿ ಹಾಸನದಲ್ಲಿ ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ 7 ಮಂದಿ, ಉಡುಪಿಯಲ್ಲಿ 5, ಹಾಸನ ಮತ್ತು ಕಲಬುರಗಿಯಲ್ಲಿ 4 ಮಂದಿ ಮೇಲೆ ನಿಗಾ ಇಡಲಾಗಿದೆ.

ಕಲಬುರಗಿಯಲ್ಲಿ ಮೃತ ವ್ಯಕ್ತಿ ಹಲವು ಜನರನ್ನು ಸಂಪರ್ಕಿಸಿದ್ದ. ಈ ಪೈಕಿ 30 ಮಂದಿ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. 30 ಜನರಲ್ಲಿ 4 ಮಂದಿ ಮೇಲೆ ಪ್ರತ್ಯೇಕ ನಿಗಾ ವಹಿಸಲಾಗಿದ್ದು ರಕ್ತದ ಮಾದರಿಯನ್ನು ಸಂಗ್ರಹಿಸಿದ್ದು, ಫಲಿತಾಂಶ ಬರಬೇಕಿದೆ.

Comments

Leave a Reply

Your email address will not be published. Required fields are marked *