ಕೆಟ್ಟ ದೃಷ್ಟಿ ಬೀರಿದರೆ ಬಿಡಲ್ಲ- ಪಾಕಿಗೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ

ನವದೆಹಲಿ: ಫಿರಂಗಿ ದಾಳಿ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಭಾರತ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ದೇಶದ ಮೇಲೆ ದುಷ್ಟ ಕಣ್ಣು ಹಾಕಿದರೆ ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನೇವಲ್ ಕಮಾಂಡರ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ ಎಂದಿಗೂ ಆಕ್ರಮಣಕಾರಿಯಾಗಿಲ್ಲ. ವಿಶ್ವದ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ಅಲ್ಲದೆ ಯಾವುದೇ ದೇಶದ ಒಂದು ಇಂಚು ಭೂಮಿಯನ್ನು ಸಹ ಬಲವಂತವಾಗಿ ಸ್ವಾಧೀನಪಡಿಸಿಕೊಂಡಿಲ್ಲ. ಆದರೆ ನಮ್ಮ ದೇಶದ ಮೇಲೆ ಕೆಟ್ಟ ಕಣ್ಣು ಹಾಕಲು ಪ್ರಯತ್ನಿಸುವವರಿಗೆ ತಕ್ಕ ಉತ್ತರ ನೀಡಲು ಭಾರತೀಯ ಸೇನೆ ಸಂಪೂರ್ಣ ಸನ್ನದ್ಧವಾಗಿದೆ ಎಂದರು.

ನೌಕಾಪಡೆಯು ಜಾಗರೂಕತೆಯನ್ನು ಬಲಪಡಿಸಿದೆ. ಅಲ್ಲದೆ 26/11(ಮುಂಬೈ ದಾಳಿ) ಯಂತಹ ದಾಳಿಗಳು ಮರುಕಳಿಸದಂತೆ ನೋಡಿಕೊಂಡಿದೆ. ಭಾರತೀಯ ನೌಕಾಪಡೆಯ ಕಾವಲಿನಲ್ಲಿ ಸಮುದ್ರ ಮಾರ್ಗ ಸುರಕ್ಷಿತವಾಗಿದೆ. ನೌಕಾಪಡೆಯು ಎಲ್ಲ ಸಮಸ್ಯೆಗಳನ್ನು ಪರಿಹರಿಸಿದ್ದು, 27/11 ನಂತಹ ದಾಳಿಗಳು ಮತ್ತೆ ನಡೆಯದಂತೆ ವಾಯು ಸೇನೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಭಾನುವಾರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ನೀಲಂ ಕಣಿವೆಯಲ್ಲಿ ನಾಲ್ಕು ಭಯೋತ್ಪಾದಕರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿತ್ತು. ಇದರಿಂದಾಗಿ ಸಾವು-ನೋವು ಹಾಗೂ ಅಪಾರ ಹಾನಿ ಸಂಭವಿಸಿತ್ತು. ಇದರ ಬೆನ್ನಲ್ಲೇ ರಾಜನಾಥ್ ಸಿಂಗ್ ಇದೀಗ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಿಒಕೆಯ ಒಳಗೆ ತಂಗ್ಧರ್ ಸೆಕ್ಟರ್ ಎದುರಿನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆಯು ದಾಳಿ ನಡೆಸಿತ್ತು. ಭಾರತದೊಳಗೆ ನುಸುಳಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಲಾಗಿತ್ತು. ಸೇನೆ ನಡೆಸಿದ ದಾಳಿಯಿಂದಾಗಿ ಪಿಒಕೆಯಲ್ಲಿ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ. ಸೇನೆಯು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿದೆ ಎನ್ನಲಾಗಿತ್ತು.

ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಸೆಕ್ಟರ್‍ನಲ್ಲಿ ಭಾನುವಾರ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿತ್ತು. ಇದರಿಂದಾಗಿ ಇಬ್ಬರು ಭಾರತೀಯ ಸೈನಿಕರು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದರು. ಈ ಘಟನೆ ನಂತರ ಭಾರತೀಯ ಸೇನೆ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಫಿರಂಗಿ ದಾಳಿ ನಡೆಸಿತ್ತು. ದಾಳಿ ವೇಳೆ ಒಂದು ಮನೆ ಹಾಗೂ ಅಕ್ಕಿ ಗೋಡೌನ್ ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಎರಡು ಕಾರು, 19 ಹಸು ಹಾಗೂ ಕುರಿಗಳನ್ನು ಹೊಂದಿರುವ ಎರಡು ಹಸು ಶೆಲ್ಟರ್ ಗಳನ್ನೂ ನಾಶಪಡಿಸಲಾಗಿತ್ತು.

Comments

Leave a Reply

Your email address will not be published. Required fields are marked *