ಇಂದು ಮಡಿಕೇರಿಗೆ ನಿರ್ಮಲಾ ಸೀತಾರಾಮನ್- ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಘೋಷಣೆ?

ಮಡಿಕೇರಿ: ಪ್ರವಾಸಿಗರ ತಾಣವಾದ ಮಂಜಿನನಗರಿಯಲ್ಲಿ ಅವರಿಸಿದ ಜಲಪ್ರಳಯದಿಂದಾಗಿ ಅಕ್ಷರಶಃ ಬದುಕು ನರಕ ಸದೃಶ್ಯವಾಗಿದೆ. ಕೊಡಗಿನಲ್ಲಿ ಮಳೆ ಅಲ್ಪವಿರಾಮ ನೀಡಿದ್ದರೂ, ಯಾತನೆಗೆ ಮಾತ್ರ ವಿರಾಮವಿಲ್ಲದಂತಾಗಿದೆ. ಈ ಮಧ್ಯೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗಿಗೆ ಆಗಮಿಸುತ್ತಿದ್ದಾರೆ.

ಮೈಸೂರಿನಿಂದ ಕುಶಾಲನಗರಕ್ಕೆ ತೆರಳಿ ಅಲ್ಲಿ ಕುವೆಂಪು ಬಡಾವಣೆ, ಸಾಯಿ ಬಡಾವಣೆಗೆ ಭೇಟಿ ನೀಡಲಿದ್ದಾರೆ. ನಂತರ ಭೂಕುಸಿತವಾಗಿರುವ ಮಾದಾಪುರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಡಿಕೇರಿಯ ಮೈತ್ರಿ ಹಾಲ್ ನಲ್ಲಿರುವ ಸಂತ್ರಸ್ತರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

ಇದೇ ವೇಳೆ ನಿರ್ಮಲಾ ಸೀತಾರಾಮನ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆಯಿದೆ.

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮಂಜಿನ ನಗರಿ ಮಡಿಕೇರಿಯಲ್ಲೀಗ ಹಸಿರು ಕಳೆಗುಂದಿದೆ. ಮಳೆ ಅಲ್ಪ ವಿರಾಮ ನೀಡಿದ್ದರಿಂದ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿಎಲ್ಲಿ ನೋಡಿದ್ರೂ ಅವಶೇಷಗಳೇ ಕಂಡುಬರುತ್ತಿವೆ. ಹಲವೆಡೆ ಊರಿಗೆ ಊರುಗಳೇ ಕೊಚ್ಚಿ ಹೋಗಿವೆ. ಅಲ್ಲೊಂದು ಊರು ಇತ್ತಾ ಅಂತ ಕೇಳೋ ಪರಿಸ್ಥಿತಿ ಬಂದಿದೆ. ಹಟ್ಟಿಹೊಳೆಯ 20ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ. ಊರಿನಲ್ಲಿ ಪುಟ್ಟದಾದ ಹೊಳೆ ಹರಿದು ಹೋಗ್ತಿದೆ. ಮಳೆ ನಿಂತರೂ ಕೊಚ್ಚಿಹೋದ ಊರಿನೊಳಗೆ ಈಗ ತೊರೆಯದ್ದೇ ಸದ್ದಾಗಿದೆ.

ಇತ್ತ ಜೋಡುಪಾಲ ದುರಂತದ ಪ್ರದೇಶದಲ್ಲೀಗ ನೀರವ ಮೌನ ಆವರಿಸಿದೆ. ಭೂಕುಸಿತದಿಂದ ಕೊಚ್ಚಿಹೋದ ರಸ್ತೆಗಳು, ಮಣ್ಣಿನಡಿಗೆ ಬಿದ್ದ ಮನೆಗಳು ಅಲ್ಲಿನ ಕರುಣಾಜನಕ ಸ್ಥಿತಿಗೆ ಕನ್ನಡಿ ಹಿಡಿಯುತ್ತೆ. ಜೋಡುಪಾಲದಲ್ಲಿ ಸಂತ್ರಸ್ತ ಜನರ ಸ್ಥಿತಿ ಒಂದ್ಕಡೆಯಾದರೆ, ಮೂಕಪ್ರಾಣಿಗಳ ಸ್ಥಿತಿ ಶೋಚನೀಯವಾದೆ. ಇನ್ನು ಆಗಸ್ಟ್ 17ರಂದು ಕಣ್ಮರೆಯಾಗಿದ್ದ ಹೆಬ್ಬಟ್ಟಗೇರಿ ಗ್ರಾಮದ ವೃದ್ದೆ ಉಮ್ಮವ್ವರ ಮೃತದೇಹ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ. ಇತ್ತ ಸಾಕುನಾಯಿ, ಬೆಕ್ಕು, ಜಾನುವಾರುಗಳಿಗೆ ಆಹಾರ ಇಲ್ಲದೆ ಸಂಕಷ್ಟ ಎದುರಾಗಿದೆ.

ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡುವುದು ಸರ್ಕಾರದ ಕರ್ತವ್ಯ. 76 ಶಾಲೆಗಳು ರಿಪೇರಿಯಾಗಬೇಕಿದೆ. ಮಕ್ಕಳನ್ನು ಪಕ್ಕದೂರಿನ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ನಿರಾಶ್ರಿತ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲೇ ಶಿಕ್ಷಣ ನೀಡಲಾಗುವುದು. ಇನ್ನೆರಡು ದಿನದಲ್ಲಿ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

ಸುಳ್ಯಕ್ಕೆ ಮಡಿಕೇರಿ, ಭಾಗಮಂಡಲ, ಕರಿಕೆ, ಪಾಣತ್ತೂರು, ಆಲೆಟ್ಟಿ ಮಾರ್ಗವಾಗಿ ಏಳು ಬಸ್‍ಗಳನ್ನು ಮಡಿಕೇರಿ ಡಿಪೋದಿಂದ ಹಾಕಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *