ಮೇಡಮ್ ಟುಸಾಡ್ಸ್ ನಲ್ಲಿ ಅನಾವರಣಗೊಳ್ಳಲಿದೆ ದೀಪಿಕಾ ಪಡುಕೋಣೆ ಮೇಣದ ಪ್ರತಿಮೆ

ನವದೆಹಲಿ: ಕನ್ನಡತಿ ಹಾಗೂ ಬಾಲಿವುಡ್ ತಾರೆಯಾದ ದೀಪಿಕಾ ಪಡುಕೋಣೆಯ ಮೇಣದ ಪ್ರತಿಮೆ ಲಂಡನ್ ಮತ್ತು ದೆಹಲಿಯ ಮೇಡಮ್ ಟುಸಾಡ್ಸ್ ನ ಮ್ಯೂಸಿಯಂನಲ್ಲಿ ಅತಿ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.

ಈ ಕುರಿತು ಸೋಮವಾರ ಫೇಸ್ ಬುಕ್ ಲೈವ್ ಮಾಡಿರುವ ದೀಪಿಕಾ ಪಡುಕೋಣೆಯವರು, ಲಂಡನ್‍ನ ಮೇಡಮ್ ಟುಸಾಡ್ಸ್ ನಲ್ಲಿ ಪ್ರತಿಮೆ ಅನಾವರಣವಾಗುತ್ತಿರುವ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಮೊದಲ ಪ್ರತಿಮೆ ಮುಂದಿನ ವರ್ಷಾರಂಭದಲ್ಲಿ ಲಂಡನ್ ಮತ್ತು ದೆಹಲಿಯ ಮ್ಯೂಸಿಯಂಗಳಲ್ಲಿ ಸ್ಥಾಪನೆಯಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ನನ್ನ ಪ್ರತಿಮೆಯನ್ನು ಮೇಡಮ್ ಟುಸಾಡ್ಸ್ ನಲ್ಲಿ ಸ್ಥಾಪಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಮ್ಯೂಸಿಯಂನ ಮೇಣದ ಪ್ರತಿಮೆ ರಚನಾಕಾರ ಕಲಾವಿದರೊಂದಿಗೆ ನಡೆದ ಮಾತುಕತೆ ನನ್ನನ್ನು ರೋಮಾಂಚನಗೊಳಿಸಿದೆ ಎಂದು ಈ ವೇಳೆ ಹೇಳಿಕೊಂಡಿದ್ದಾರೆ.

ಮೇಡಮ್ ಟುಸಾಡ್ಸ್ ಮ್ಯೂಸಿಯಂನ ಕಲಾವಿದರು ಮತ್ತು ಪರಿಣತರು ಲಂಡನ್ ನಲ್ಲಿ ದೀಪಿಕಾ ಪಡುಕೋಣೆ ಅವರನ್ನು ಭೇಟಿಯಾಗಿದ್ದು, ಪ್ರತಿಮೆ ರಚಿಸಲು ದೀಪಿಕಾ ಅವರ 200 ಸೂಕ್ಷ್ಮ ಅಳತೆಗಳನ್ನು ಮತ್ತು ಫೋಟೋಗಳನ್ನು ಸಂಗ್ರಹಿಸಿಕೊಂಡಿದ್ದಾರೆ.

https://twitter.com/deepikapadukone/status/1021372899901526016

ನಾನು ಚಿಕ್ಕವಳಿದ್ದಾಗ ತಂದೆ ತಾಯಿಯೊಂದಿಗೆ ಒಂದೇ ಒಂದು ಬಾರಿ ಮಾತ್ರ ಭೇಟಿ ನೀಡಿದ್ದು, ಆ ನೆನಪು ನನಗೆ ಇನ್ನೂ ಹಸಿರಾಗಿದೆ ಎಂದಿದ್ದಾರೆ. ಈಗ ತಮ್ಮ ಮೇಣದ ಪ್ರತಿಮೆ ರಚನೆಗೆ ಲಂಡನ್ ನ ಮ್ಯೂಸಿಯಂನಿಂದ ಪತ್ರ ಪಡೆದಿರುವ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ದೀಪಿಕಾ ಹೇಳಿದ್ದಾರೆ.

ಲಂಡನ್ ಮೇಡಮ್ ಟುಸಾಡ್ಸ್ ಮ್ಯೂಸಿಯಂನಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ಕೆಲವೇ ಕೆಲವು ಬಾಲಿವುಡ್ ತಾರೆಯರ ಪ್ರತಿಮೆಗಳನ್ನು ಕಾಣಬಹುದಾಗಿದೆ. ಈಗ ಈ ಸಾಲಿನಲ್ಲಿ ದೀಪಿಕಾ ಪಡುಕೋಣೆಯವರು ಸ್ಥಾನ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *