ಪದ್ಮಾವತ್ ಬಳಿಕ ಐತಿಹಾಸಿಕ ಪಾತ್ರಗಳಲ್ಲಿ ನಟಿಸಲ್ಲ ಅಂದ್ರು ದೀಪಿಕಾ ಪಡುಕೋಣೆ

ಮುಂಬೈ: ಬಾಲಿವುಡ್ ನಲ್ಲಿ ತನ್ನದೇ ಚಾಪು ಮೂಡಿಸಿರುವ ನಟಿ ದೀಪಿಕಾ ಪಡುಕೋಣೆ. ಬಾಲಿವುಡ್ ಇಂಡಸ್ಟ್ರಿಗೆ ಪ್ರವೇಶ ನೀಡಿದಾಗಿನಿಂದಲೂ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸುತ್ತಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದ್ರೆ ದೀಪಿಕಾ ಮುಂದಿನ ದಿನಗಳಲ್ಲಿ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಲ್ಲ ಅಂತಾ ಹೇಳಿರುವುದು ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದೆ.

ದೀಪಿಕಾ ಪಡುಕೋಣೆ ನಟಿಸಿರುವ ಐತಿಹಾಸಿಕ ಕಥೆಯನ್ನು ಹೊಂದಿರುವ ‘ಪದ್ಮಾವತ್’ ಸಿನಿಮಾ ಜನವರಿ 25ರಂದು ತೆರೆಕಂಡಿದೆ. ಸಿನಿಮಾದಲ್ಲಿ ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ನಟಿಸಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದಿದೆ. ಈಗಾಗಲೇ ಮೆಚ್ಚುಗೆಯನ್ನು ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನೀವು ಮುಂದಿನ ದಿನಗಳಲ್ಲಿಯೂ ಐತಿಹಾಸಿಕ ಸಿನಿಮಾದಲ್ಲಿ ನಟಿಸಲು ಇಷ್ಟಪಡ್ತೀರಾ ಅಂತಾ ಕೇಳಿದಾಗ, ಇಷ್ಟೆಲ್ಲಾ ಆದ ಮೇಲೆಯೂ ಮತ್ತೆ ಐತಿಹಾಸಿಕ ಚಿತ್ರಗಳಲ್ಲಿ ನಟಿಸಲ್ಲ ಅಂತಾ ಖಡಕ್ ಆಗಿ ಹೇಳಿದ್ದಾರೆ.

ನನ್ನ ಪೋಷಕರು ಪದ್ಮಾವತ್ ಸಿನಿಮಾ ನೋಡಿದ ಬಳಿಕ ನನ್ನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಪದ್ಮಾವತ್ ಸಿನಿಮಾದಲ್ಲಿ ರಾಣಿಯಾಗಿ ನಟಿಸಿರುವುದು ನಮ್ಮ ಮಗಳೆ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಪೋಷಕರು ಸಿನಿಮಾ ನೋಡಿ ಬಂದಾಗ ತಡರಾತ್ರಿ ಆಗಿದ್ದರೂ ನನಗೆ ವಿಡಿಯೋ ಕಾಲ್ ಮಾಡಿ ಸಿನಿಮಾ ಮತ್ತು ನಟನೆಯ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು. ಪೋಷಕರ ಕಣ್ಣುಗಳಲ್ಲಿ ಸಿನಿಮಾ ನೋಡಿದ ಸಂತೋಷವನ್ನು ನೋಡಿದೆ ಅಂತಾ ದೀಪಿಕಾ ಸಂತೋಷವನ್ನು ವ್ಯಕ್ತಪಡಿಸಿದರು.

ಪದ್ಮಾವತ್ ಸಿನಿಮಾ 2017 ಡಿಸೆಂಬರ್ 01ರಂದು ತೆರೆಕಾಣಬೇಕಿತ್ತು. ಆದ್ರೆ ಚಿತ್ರದ ಬಿಡುಗಡೆ ರಾಜಸ್ಥಾನ, ಗುಜರಾತ್, ಹಿಮಾಚಲ ಪ್ರದೇಶ ಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ಣಿ ಸೇನಾ ಮಾತ್ರ ಇನ್ನು ಪದ್ಮಾವತ್ ವಿರುದ್ದ ಪ್ರತಿಭಟನೆಯನ್ನು ಮಾಡುತ್ತಿದೆ. ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸೆನ್ಸಾರ್ ಮಂಡಳಿ ಸಿನಿಮಾ ಟೈಟಲ್ ಸೇರಿದಂತೆ ಹಲವು ಬದಲಾವಣೆಗಳನ್ನು ತರಲು ಚಿತ್ರತಂಡಕ್ಕೆ ಸೂಚಿಸಿತ್ತು. ಸೆನ್ಸಾರ್ ಮಂಡಳಿ ಸೂಚನೆಯಂತೆ ಚಿತ್ರತಂಡವೂ ಬದಲಾವಣೆಗೆ ಒಪ್ಪಿಕೊಂಡಿತ್ತು. ಈ ನಡುವೆ ಚಿತ್ರದಲ್ಲಿ ಸಾಕಷ್ಟು ಬದಲಾವಣೆ ತಂದರೂ ಕರ್ಣಿ ಸೇನಾ ಮಾತ್ರ ತನ್ನ ನಿಲುವನ್ನು ಬದಲಿಸಿಕೊಂಡಿರಲಿಲ್ಲ.

ಪದ್ಮಾವತ್ ಸಿನಿಮಾ ಸೆಟ್ಟೇರುತ್ತಲೇ ಅದರ ಜೊತೆಗೆ ವಿವಾದಗಳು ಸಹ ಹುಟ್ಟಿಕೊಂಡಿದ್ದವು. ವಿವಾದಗಳ ನಡುವೆ ಸಿನಿಮಾದ ನಾಯಕಿ ಆಗಿರುವ ದೀಪಿಕಾ ಪಡುಕೋಣೆ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿತ್ತು. ಈ ಹಿಂದೆ ದೀಪಿಕಾ ಪಡುಕೋಣೆ ನಟಿಸಿದ್ದ ಐತಿಹಾಸಿಕ ಕಥೆಯನ್ನು ಹೊಂದಿದ್ದ ‘ಬಾಜೀರಾವ್ ಮಸ್ತಾನಿ’ ಚಿತ್ರೀಕರಣ ಬಿಡುಗಡೆ ವೇಳೆ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಈ ಎಲ್ಲ ಕಾರಣಗಳಿಂದ ದೀಪಿಕಾ ಮುಂದಿನ ದಿನಗಳಲ್ಲಿ ಐತಿಹಾಸಿಕ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

Comments

Leave a Reply

Your email address will not be published. Required fields are marked *