ಗೋ ರಕ್ಷಣೆಗಾಗಿ ಪಕ್ಷ ತೊರೆದ ಬಿಜೆಪಿ ಶಾಸಕ

ಹೈದರಾಬಾದ್: ತೆಲಂಗಾಣ ರಾಜ್ಯದ ಗೋಶಮಹಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ತೆಲಂಗಾಣದ ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ. ಲಕ್ಷ್ಮಣ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಕೇಂದ್ರದಲ್ಲಿ ತಮ್ಮ ಪಕ್ಷ ಆಡಳಿತದಲ್ಲಿ ಇದ್ದರೂ, ಗೋ ರಕ್ಷಣೆ ಬಗ್ಗೆ ಸೂಕ್ತವಾದ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟಿ.ರಾಜಾ ಸಿಂಗ್ ಪರೋಕ್ಷವಾಗಿ ತಮ್ಮ ರಾಜೀನಾಮೆಯ ಕಾರಣವನ್ನು ತಿಳಿಸಿದ್ದಾರೆ.

ಈ ಸಂಬಂಧ ಟ್ವಿಟ್ಟರ್‍ನಲ್ಲಿ ಸೆಲ್ಫಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ಟಿ.ರಾಜಾ ಸಿಂಗ್, ನನಗೆ ಹಿಂದೂ ಧರ್ಮ, ಗೋರಕ್ಷೆ ಮೊದಲು, ನಂತರ ರಾಜಕೀಯ. ಈ ಸಂಬಂಧ ನನ್ನ ರಾಜೀನಾಮೆ ಪತ್ರವನ್ನು ಲಕ್ಷ್ಮಣ್ ಅವರಿಗೆ ನೀಡಿದ್ದೇನೆ. ನಾನು ಹಲವು ಬಾರಿ ಸದನದಲ್ಲಿ ಗೋ ರಕ್ಷಣೆಯ ಬಗ್ಗೆ ಕಟ್ಟು ನಿಟ್ಟಿನ ಕಾನೂನುಗಳನ್ನು ತರಬೇಕೆಂದು ನಾಯಕರ ಮೇಲೆ ಒತ್ತಡ ತಂದಿದ್ದೇನೆ. ಆದ್ರೆ ಯಾರು ನನ್ನ ಮಾತುಗಳನ್ನು ಕೇಳಿಲ್ಲ ಎಂದು ಟಿ.ರಾಜಾ ಅಸಮಾಧಾನ ಹೊರಹಾಕಿದ್ದಾರೆ.

ವಿಡಿಯೋದಲ್ಲಿ ಏನಿದೆ?:
ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದು ಯಾಕೆ ಎಂದು ನನ್ನ ಬೆಂಬಲಿಗರು ಹಾಗು ಮಾಧ್ಯಮ ಮಿತ್ರರು ಪ್ರಶ್ನೆ ಮಾಡುತ್ತಿದ್ದಾರೆ. ತೆಲಂಗಾಣ ಸರ್ಕಾರ ಗೋ ಹತ್ಯೆ ಮಾಡಲು ಮುಂದಾಗುತ್ತಿದೆ. ಈ ಬಾರಿಯ ಬಕ್ರೀದ್ ಹಬ್ಬದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಬಕ್ರೀದ್ ನಲ್ಲಿ ಎಷ್ಟು ಗೋವುಗಳನ್ನು ಹತ್ಯೆ ಮಾಡಲಾಗುತ್ತೋ ಅಷ್ಟು ಮುಸ್ಲಿಂ ಮತಗಳು ಸಿಎಂ ಕೆಸಿ ಚಂದ್ರಶೇಖರ್ ಅವರಿಗೆ ಲಭಿಸಲಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗೋ ಹತ್ಯೆ ಮಾಡುವವರಿಗೆ ಪೊಲೀಸ್ ರಕ್ಷಣೆ ನೀಡಿದ್ದು, ವಿರೋಧಿಸಿದವರನ್ನು ಬಂಧಿಸಬೇಕೆಂದು ತಿಳಿಸಿದೆ. ನಾವು ಹಲವು ವರ್ಷಗಳಿಂದ ಗೋ ರಕ್ಷಣೆಯಲ್ಲಿ ತೊಡಗಿಕೊಂಡಿದ್ದೇವೆ. ಕಳೆದ ಬಾರಿ ನಮ್ಮ ಒತ್ತಡಗಳಿಂದ ಬಕ್ರೀದ್ ನಲ್ಲಿ ಪ್ರಾಣಿ ಬಲಿ ಕಡಿಮೆಯಾಗಿತ್ತು. ನಾನು ಗೋ ರಕ್ಷಣೆಗಾಗಿ ರಸ್ತೆಗೆ ಇಳಿದ್ರೆ ಏನು ಬೇಕಾದ್ರೂ ಆಗಬಹುದು. ನನ್ನಿಂದಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರ ಮೇಲೆ ಆರೋಪಗಳು ಬಾರದೇ ಇರಲಿ ಎಂದು ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Comments

Leave a Reply

Your email address will not be published. Required fields are marked *