ತೆಲಂಗಾಣ | ಸಂಚಲನ ಮೂಡಿಸಿದ್ದ ಪ್ರಣಯ್ ಹತ್ಯೆ ಕೇಸ್ – ಅಪರಾಧಿಗೆ ಗಲ್ಲು ಶಿಕ್ಷೆ, ಉಳಿದವರಿಗೆ ಜೀವಾವಧಿ ಶಿಕ್ಷೆ

ಹೈದರಾಬಾದ್‌: ತೆಲಂಗಾಣ ರಾಜ್ಯಗಳಲ್ಲಿ ಸಂಚಲನ ಮೂಡಿಸಿದ್ದ ಪ್ರಣಯ್ ಹತ್ಯೆ ಕೇಸ್ ವಿಚಾರಣೆ ನಡೆಸಿದ್ದ ನಲ್ಗೊಂಡ ಕೋರ್ಟ್ ತೀರ್ಪು ನೀಡಿದೆ. ನಲ್ಗೊಂಡ ಜಿಲ್ಲೆಯಲ್ಲಿ 2018ರಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆ ಪ್ರಕರಣದ ಅಪರಾಧಿಗೆ ಇಲ್ಲಿನ ಎಸ್‌ಸಿ/ಎಸ್‌ಟಿ 2ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಅಂತರ್ಜಾತಿ ವಿವಾಹವಾಗಿದ್ದ ಪ್ರಣಯ್‌ನನ್ನು ಪತ್ನಿ ಅಮೃತ ಪೋಷಕರು 2018ರಲ್ಲಿ ಹತ್ಯೆ ಮಾಡಿದ್ರು. ಎ1 ಆರೋಪಿ ಮಾರುತಿ ರಾವ್ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ನ್ಯಾಯಾಲಯವು ಪ್ರಕರಣದ 2ನೇ ಆರೋಪಿಯಾದ ಸುಭಾಶ್ ಕುಮಾರ್ ಶರ್ಮಾಗೆ ಮರಣದಂಡನೆ ಮತ್ತು ಇತರ ಆರು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕೊಲೆ ಸಂಚನ್ನು ಕಾರ್ಯರೂಪಕ್ಕೆ ತಂದಿದ್ದ ಸುಭಾಶ್ ಬಿಹಾರ ಮೂಲದ ವ್ಯಕ್ತಿ. ಮೇಲ್ವಾತಿಯ ಯುವತಿಯನ್ನು ಪ್ರೀತಿಸಿ ಪ್ರಣಯ್ ವಿವಾಹವಾಗಿದ್ದರು. ಇದಕ್ಕೆ ಯುವತಿಯ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಪತಿಯ ಕೊಲೆಯಲ್ಲಿ ತನ್ನ ತಂದೆ ಮಾರುತಿ ರಾವ್ ಪಾತ್ರ ಇದೆ ಎಂದು ಯುವತಿ ಆರೋಪಿಸಿದ್ದರು.

ಏನಾಗಿತ್ತು?
ಮಿದ್ಯಾಲಗೂಡದಲ್ಲಿ 2018ರ ಸೆಪ್ಟೆಂಬರ್ 14ರಂದು ತನ್ನ ತಾಯಿಯ ಜೊತೆಗೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಸ್ ಬರುವಾಗ ದುಷ್ಕರ್ಮಿಗಳು ಪ್ರಣಯ್ ಮೇಲೆ ದಾಳಿ ಮಾಡಿ ಚಾಕುವಿನಿಂದ ಇರಿದು ಕೊಂದಿದ್ದರು. ಈ ಪ್ರಕರಣ ತೆಲಂಗಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.