ಕೊಕ್ಕರೆ ಬೆಳ್ಳೂರಿನಲ್ಲಿ ಮುಂದುವರಿಯುತ್ತಿದೆ ಪಕ್ಷಿಗಳ ಸಾವು!

ಮಂಡ್ಯ: ರಾಜ್ಯದ ಪಕ್ಷಿಧಾಮ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಪಕ್ಷಿಗಳ ಸಾವು ಮುಂದುವರಿದಿದ್ದು, ಆತಂಕಕ್ಕೆ ಕಾರಣವಾಗಿದೆ.

ಸಂತಾನೋತ್ಪತ್ತಿಗಾಗಿ ವಲಸೆ ಬಂದಿದ್ದ ಕೊಕ್ಕರೆಗಳು ಅಸ್ವಸ್ಥಗೊಂಡು ಮರದ ಮೇಲಿನಿಂದ ಬೀಳುತ್ತಿವೆ. ಮತ್ತೆ ನಾಲ್ಕು ಹಕ್ಕಿಗಳು ಬಿದ್ದಿದ್ದು, ಅದರಲ್ಲಿ ಒಂದು ಪಕ್ಷಿ ಸಾವನ್ನಪ್ಪಿದೆ. ಇನ್ನು ಮೂರು ಹಕ್ಕಿಗಳು ಆಹಾರ ಸೇವಿಸದೇ ಹಾರಲಾಗದೇ ಒದ್ದಾಡುತ್ತಿವೆ. ಕಳೆದ ಒಂದು ವಾರದ ಹಿಂದೆ ನಾಲ್ಕು ಹಕ್ಕಿಗಳು ಸಾವನ್ನಪ್ಪಿದ್ದವು. ಇದೀಗ ಮತ್ತೆ ಹಕ್ಕಿಗಳ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಹಿಂದೆ ಪಕ್ಷಿಗಳು ಸಾವನ್ನಪ್ಪಿದ್ದಾಗ ಪಕ್ಷಿಗಳ ಸಾವಿನ ಹಿನ್ನೆಲೆಯಲ್ಲಿ ಹಕ್ಕಿಜ್ವರ, ಸೋಂಕಿನಿಂದ ಕೊಕ್ಕರೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಪಶು ವೈದ್ಯರು ಮೃತಪಟ್ಟ ಕೊಕ್ಕರೆಗಳನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದರು. ಮೂರು ಕೊಕ್ಕರೆಗಳ ಪೈಕಿ ಎರಡು ಜಂತುಹುಳು ಸಮಸ್ಯೆಯಿಂದ ಸಾವನ್ನಪ್ಪಿರೋದು ಎಂದು ಪರಿಶೀಲನೆ ವೇಳೆ ತಿಳಿದುಬಂದಿತ್ತು.

ಪಕ್ಷಿಗಳ ಸಾವಿಗೆ ಕಾರಣ ತಿಳಿದು ಬಂದ ಮೇಲೆ ಸೂಕ್ತ ಚಿಕಿತ್ಸೆ ನೀಡಿದ್ದು, ಮತ್ತೆ ಈ ರೀತಿ ಆದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಮತ್ತೆ ಹಕ್ಕಿಗಳು ಸಾಯುತ್ತಿದ್ದು, ಸೂಕ್ತ ಕಾರಣ ತಿಳಿದು ಬಂದಿಲ್ಲ. ಸಂತಾನೋತ್ಪತ್ತಿಗಾಗಿ ವಲಸೆ ಬಂದಿರುವ ಪೆಲಿಕಾನ್ ಹಕ್ಕಿಗಳೇ ನಿರಂತರವಾಗಿ ಸಾವಿಗೀಡಾಗುತ್ತಿವೆ. ಇದು ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಗಿದ್ದು, ಕೂಡಲೇ ಈ ಬಗ್ಗೆ ವೈದ್ಯಾಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.

 

Comments

Leave a Reply

Your email address will not be published. Required fields are marked *