ಸರ್ಕಾರಿ ಯೋಜನೆಗಳಿಗೆ ಆಧಾರ್ ಸಂಯೋಜನೆ ಮಾಡಲು ಗಡುವು ವಿಸ್ತರಣೆ

ನವದೆಹಲಿ: ವಿವಿಧ ಸರ್ಕಾರಿ ಯೋಜನೆಗಳಿಗೆ ಆಧಾರ್ ಸಂಖ್ಯೆಯನ್ನು ಸಂಯೋಜನೆ ಮಾಡಲು ನೀಡಲಾಗಿದ್ದ ಗಡುವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ.

ಈ ಬಗ್ಗೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಇಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 30 ರವರೆಗೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳು ವಿಸ್ತರಿಸಲಾಗಿದೆ. ಸುಮಾರು 30 ಸರ್ಕಾರಿ ಯೋಜನೆಗಳಿಗೆ ಆಧಾರ್ ಮಾಹಿತಿಯನ್ನು ಒದಗಿಸುವುದು ಕಡ್ಡಾಯ ಮಾಡಲಾಗಿದೆ.

ಸರ್ಕಾರ ಗಡುವು ವಿಸ್ತರಣೆ ಮಾಡಲು ಸಿದ್ಧವಿದ್ರೆ ಈ ಬಗ್ಗೆ ನವೆಂಬರ್‍ನಲ್ಲಿ ವಿಚಾರಣೆ ಆಗಬಹುದು ಎಂದು ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಹೇಳಿದ ನಂತರ ವೇಣುಗೋಪಾಲ್ ಈ ಹೇಳಿಕೆ ನೀಡಿದ್ರು.

ನವೆಂಬರ್ ಮೊದಲ ವಾರದಲ್ಲಿ ಆಧಾರ್ ಸಂಬಂಧಿತ ಅರ್ಜಿಗಳನ್ನು ವಿಚಾರಣೆ ಮಾಡುವುದಾಗಿ ಮುಖ್ಯನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾ. ಅಮಿತಾವ್ ರಾಯ್ ಹಾಗೂ ನ್ಯಾ. ಎಎಮ್ ಖಾನ್ವಿಲ್ಕರ್ ಅವರ ಪೀಠ ಹೇಳಿತು.

ಜುಲೈ 1ರ ನಂತರ ಇನ್‍ಕಮ್ ಟ್ಯಾಕ್ಸ್ ರಿಟನ್ರ್ಸ್ ಫೈಲ್ ಮಾಡಲು ಹಾಗೂ ಪ್ಯಾನ್ ಕಾರ್ಡ್‍ಗೆ ಅರ್ಜಿ ಹಾಕಲು ಆಧಾರ್ ನಂಬರ್ ಮಾಹಿತಿ ನೀಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

Comments

Leave a Reply

Your email address will not be published. Required fields are marked *