ರೈಲಿನಲ್ಲಿ ಕೊಟ್ಟ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ!

ಲಕ್ನೋ: ರೈಲಿನಲ್ಲಿ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ಎಂದು ಭಾರತದ ಸಿಎಜಿ ವರದಿ ನೀಡಿದ ಒಂದು ವಾರದಲ್ಲೇ ರೈಲ್ವೆ ಅಧಿಕಾರಿಗಳು ನಿರ್ಲಕ್ಷ್ಯತನದ ಬಗ್ಗೆ ಘಟನೆಯೊಂದು ಬೆಳಕಿಗೆ ಬಂದಿದೆ.

ಇಂದು ಬೆಳಿಗ್ಗೆ ಪೂರ್ವ ಎಕ್ಸ್ ಪ್ರೆಸ್‍ನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪ್ರಯಾಣಿಕ ರೈಲ್ವೇ ಸಚಿವ ಸುರೇಶ್ ಪ್ರಭುಗೆ ಟ್ವಿಟ್ಟರ್‍ನಲ್ಲಿ ದೂರು ನೀಡಿದ್ದಾರೆ.

ಮೊಕಾಮಾ ದಲ್ಲಿ ನಾನು ಊಟಕ್ಕೆ ಆರ್ಡರ್ ಮಾಡಿದೆ. ಅದರಲ್ಲಿ ಹಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಟಿಟಿಇ ಹಾಗೂ ಕ್ಯಾಂಟೀನ್ ಮ್ಯಾನೇಜರ್‍ಗೆ ದೂರು ನೀಡಿ ನಂತರ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದೆ ಎಂದು ಪ್ರಯಾಣಿಕ ಹೇಳಿದ್ದಾರೆ. ಉತ್ತರಪ್ರದೇಶದ ಚಾಂದೌಲಿ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಔಷಧಿ ನೀಡಲಾಯ್ತು ಎಂದಿದ್ದಾರೆ.

ಟ್ವೀಟ್ ಮಾಡಿದ ಬಳಿಕ ಕಾನ್‍ಪುರ್‍ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ದಾನಾಪುರ್ ಡಿವಿಷನ್‍ನಲ್ಲಿ ಚೆಕ್ ಅಪ್ ಮಾಡಿ ಔಷಧಿ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಕಿಶೋರ್ ಕುಮಾರ್ ಹೇಳಿದ್ದಾರೆ.

ಘಟನೆ ಬಗ್ಗೆ ವರದಿಯಾದ ಬಳಿಕ ಪೂರ್ವ ಎಕ್ಸ್ ಪ್ರೆಸ್‍ನ ಕೇಟರಿಂಗ್ ಒಪ್ಪಂದವನ್ನು ರೈಲ್ವೆ ಇಲಾಖೆ ರದ್ದು ಮಾಡಿದ್ದು, 48 ಗಂಟೆಗಳ ನೋಟಿಸ್ ನೀಡಿದೆ. ಪೂರ್ವ ಎಕ್ಸ್‍ಪ್ರೆಸ್‍ನ ಕೇಟರಿಂಗ್ ಒಪ್ಪಂದವನ್ನು 2014ರ ಮೇ 15ರಂದು ಆರ್‍ಕೆ ಅಸೋಸಿಯೇಟ್ಸ್‍ಗೆ 5 ವರ್ಷಗಳವರೆಗೆ ನೀಡಲಾಗಿತ್ತು. ಆದ್ರೆ ಈಗ ಒಪ್ಪಂದವನ್ನು ಅಂತ್ಯಗೊಳಿಸುತ್ತಿರುವ ಬಗ್ಗೆ ಸರಣಿ ಟ್ವೀಟ್‍ಗಳ ಮೂಲಕ ರೈಲ್ವೆ ಇಲಾಖೆ ತಿಳಿಸಿದೆ. ಈ ಕೇಟರಿಂಗ್‍ನವರಿಗೆ ಕಳೆದ ವರ್ಷ 10 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಈ ವರ್ಷ 7.5 ಲಕ್ಷ ರೂ. ದಂಡ ವಿಧಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಟ್ವೀಟ್‍ವೊಂದರಲ್ಲಿ ತಿಳಿಸಿದೆ.

Comments

Leave a Reply

Your email address will not be published. Required fields are marked *