ಬುಡಸಮೇತ ಮರ ಕಿತ್ತು ಹಾಕಿದ್ದೀರಾ, ಈಗ ಸಚಿವ ಸ್ಥಾನ ಕೇಳಲು ಬಂದಿದ್ದೀರಾ- ಕಾರ್ಯಕರ್ತನಿಗೆ ಪರಂ ಪ್ರಶ್ನೆ

ಬೆಂಗಳೂರು: ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲು ಬಂದ ಕಾರ್ಯಕರ್ತರೊಂದಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ವಾಗ್ವಾದಕ್ಕೆ ಇಳಿದಿದ್ದರು. ಸಚಿವ ಸ್ಥಾನಕ್ಕೆ ಕೇಳಲು ಬರುವ ಉತ್ಸಾಹ ಶಾಸಕರನ್ನು ಗೆಲ್ಲಿಸೋದರಲ್ಲಿ ಇರಬೇಕಿತ್ತು ಅಂತ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದರು.

ಎಂಎಲ್‍ಸಿ ಪ್ರತಾಪ್‍ಚಂದ್ರ ಶೆಟ್ಟಿ ಪರ ಧರಣಿ ನಡೆಸುತ್ತಿದ್ದ ಕಾರ್ಯಕರ್ತರೊಬ್ಬರಿಗೆ ಬುಡ ಸಮೇತ ಮರ ಕಿತ್ತು ಹಾಕಿದ್ದೀರಾ, ಈಗ ಸಚಿವ ಸ್ಥಾನ ಕೇಳಲು ಬಂದಿದ್ದೀರಾ..? ಎಂದು ಪರಮೇಶ್ವರ್ ಪ್ರಶ್ನೆ ಮಾಡಿದರು. ಪರಮೇಶ್ವರ್ ಪ್ರಶ್ನೆಗೆ ಉತ್ತರಿಸಿದ ಕಾರ್ಯಕರ್ತ 2013ರಲ್ಲಿ ಹೆಚ್ಚು ಸ್ಥಾನ ಗೆದ್ದಿಲ್ಲವಾ ಎಂದು ನಗುತ್ತಲೇ ತಿರುಗೇಟು ಕೊಟ್ಟರು.

ಕಾರ್ಯಕರ್ತನ ತಿರುಗೇಟಿಗೆ ಸುಮ್ಮನಾದ ಪರಮೇಶ್ವರ್ ಮನವಿಯನ್ನು ಸ್ವೀಕರಿಸಿ, ಈ ಪ್ರತಾಪ್‍ಚಂದ್ರರಿಗೆ ಸಚಿವ ಸ್ಥಾನ ನೀಡಬೇಕು ಎಂಬ ನಿಮ್ಮ ಬೇಡಿಕೆಯನ್ನು ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಸಚಿವ ಸಂಪುಟ ರಚನೆಯಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರೋಣ ಅಂತ ತಿಳಿಸಿದ್ರು.

ಪ್ರತಾಪ್ ಚಂದ್ರರ ಹೆಸರು ಸಚಿವ ಸ್ಥಾನದಲ್ಲಿ ಕೇಳಿ ಬರುತ್ತಿತ್ತು. ಆದ್ರೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿದೆ. ಸಚಿವ ಸ್ಥಾನ ತಪ್ಪಲು ಹಲವು ಕಾಂಟ್ರಾಕ್ಟರ್‍ಗಳು ಲಾಬಿ ನಡೆಸಿವೆ. ನಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂದು ಪಕ್ಷದ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಒಂದು ವೇಳೆ ನಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗದೇ ಹೋದ್ರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತೇವೆ ಎಂದು ಪ್ರತಾಪ್ ಚಂದ್ರರ ಬೆಂಬಲಿಗ ಶಿವಾನಂದ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *