ಡಿಸಿಎಂ, ಮಿನಿಸ್ಟರ್ ಬೇಡ ಕೆಎಂಎಫ್ ಅಧ್ಯಕ್ಷ ಸ್ಥಾನ ಸಾಕು: ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಸ್ಥಾನ ನನಗೆ ಸಚಿವ ಸ್ಥಾನಕ್ಕಿಂತಲೂ ಹೆಚ್ಚು. ಡಿಸಿಎಂ, ಮಿನಿಸ್ಟರ್ ಹುದ್ದೆ ಬೇಡ, ಕೆಎಂಎಫ್ ಅಧ್ಯಕ್ಷ ಸ್ಥಾನ ಒಂದೇ ಸಾಕು ಎಂದು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ ಆಗಿರಲಿಲ್ಲ. ಸಚಿವ ಸ್ಥಾನ ಸಿಗದಿರುವ ಕುರಿತು ಯಾವುದೇ ಅಸಮಾಧಾನ ಇರಲಿಲ್ಲ. ನನ್ನ ಆಲೋಚನೆಗಳೇ ಬೇರೆ ಇದ್ದವು, ಹೀಗಾಗಿ ನನಗೆ ಯಾವುದೇ ಸ್ಥಾನ ಬೇಡ ಎಂದು ಹೇಳಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಎಂಎಫ್ ಅಧ್ಯಕ್ಷನಾಗುವುದು ನನ್ನ ಆಸೆಯಾಗಿತ್ತು, ರಾಜಕೀಯದ ಭವಿಷ್ಯದ ದೃಷ್ಟಿಯಿಂದ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ. ಇದಕ್ಕಾಗಿ ಸಾಕಷ್ಟು ಪ್ರಯತ್ನವೂ ನಡೆದಿದ್ದು, ಇದರ ಭಾಗವಾಗಿ ನನ್ನ ಪರವಾಗಿ ಕೆಎಂಎಫ್‍ನ 6 ನಿರ್ದೇಶಕರು ನನ್ನ ಭೇಟಿ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎಂದು ಮನವಿ ಮಾಡಿದರು. ಹೀಗಾಗಿ ನಾನು ಯೋಜನೆ ರೂಪಿಸಿಕೊಂಡು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

ನಾನು ಸಹಕಾರ ವಲಯದಿಂದ ಬಂದಿರುವವನು. ರೈತರ ಸೇವೆ ಮಾಡಲು ಒಳ್ಳೆಯ ಅವಕಾಶ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಒಲವು ತೋರಿದೆ. ಕೆಎಂಎಫ್ ದೊಡ್ಡ ಸಂಸ್ಥೆ, ಬೆಳಗಾವಿ ಡೈರಿಯಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಹೀಗಾಗಿ ಕೆಎಂಎಫ್ ಅಧ್ಯಕ್ಷನಾಗಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಕೆಎಂಎಫ್‍ನ ಒಟ್ಟು 12 ನಿರ್ದೇಶಕರ ಪೈಕಿ 6 ಜನ ನನಗೆ ಸಹಕಾರ ನೀಡುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಿದೆ, ಅವರೂ ಸಹ ಒಪ್ಪಿಗೆ ಸೂಚಿಸಿದರು. ಕಾಂಗ್ರೆಸ್‍ನ ಭೀಮಾನಾಯ್ಕ್ ಸಹ ಆಕಾಂಕ್ಷಿಯಾಗಿದ್ದಾರೆ. ಅವರೂ ಪ್ರಯತ್ನ ಪಡುತ್ತಿದ್ದಾರೆ. ಜೆಡಿಎಸ್‍ನಿಂದ ಎಚ್.ಡಿ.ರೇವಣ್ಣ ಅವರೂ ಸಹ ಪ್ರಯತ್ನ ಪಡುತ್ತಿದ್ದಾರೆ. ನಾನು ಅವಿರೋಧವಾಗಿ ಆಯ್ಕೆಯಾಗಲು ತೀರ್ಮಾನಿಸಿದ್ದೇನೆ. ಈ ಸಂಬಂಧ ಎಚ್.ಡಿ.ರೇವಣ್ಣ, ಭೀಮಾನಾಯ್ಕ್ ಜೊತೆಗೂ ಚರ್ಚೆ ನಡೆಸುತ್ತೇನೆ. ಕೆಎಂಎಫ್ ನಿರ್ದೇಶಕರ ಜೊತೆಗೂ ಚರ್ಚೆ ಮಾಡ್ತೇನೆ ಎಂದು ತಿಳಿಸಿದರು.

ಎಲ್ಲರೂ ಒಪ್ಪಿದಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತೇನೆ. ಯಾರೂ ಒಪ್ಪದಿದ್ದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಹಿಂದೆ ನಾಲ್ವರು ನಿರ್ದೇಶಕರನ್ನು ಎಚ್.ಡಿ.ರೇವಣ್ಣ ಹೈಜಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಬಾಲಚಂದ್ರ ಜಾರಕಿಹೊಳಿ, ರೇವಣ್ಣ ಅವರು ಯಾರನ್ನೂ ಹೈಜಾಕ್ ಮಾಡಿರಲಿಲ್ಲ. ನಿರ್ದೇಶಕರೇ ಒಪ್ಪಿ ರೇವಣ್ಣ ಪರ ಇದ್ದರು ಎಂದು ರೇವಣ್ಣ ಪರ ಬಾಲಚಂದ್ರ ಬ್ಯಾಟಿಂಗ್ ಮಾಡಿದ್ದಾರೆ.

ಎಲ್ಲರನ್ನೂ ಒಪ್ಪಿಸಲು ಪ್ರಯತ್ನಿಸುತ್ತೇನೆ. ಒಂದು ವೇಳೆ ಒಪ್ಪದಿದ್ದಲ್ಲಿ ಚುನಾವಣೆ ನಡೆಯಲಿ, ನನಗೆ ಗೆಲ್ಲುವ ಭರವಸೆ ಇದೆ. ಚುನಾವಣೆಯಲ್ಲಿ ನಾನು ಖಂಡಿತಾ ಗೆಲ್ಲುತ್ತೇನೆ. ಎಷ್ಟು ಜನ ನಿರ್ದೇಶಕರು ನನ್ನ ಪರ ಇದ್ದಾರೆ ಎಂಬುದು 31 ರಂದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *