ಬೆದರಿಕೆಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ- ದೇವರಾಜೇಗೌಡ ಆರೋಪಕ್ಕೆ ಡಿಕೆಶಿ ತಿರುಗೇಟು

ಬೆಂಗಳೂರು: ಈ ಬ್ಲಾಕ್‌ಮೇಲ್‌ಗೆ ನಾವು ತಲೆ ಕೆಡಿಸಿಕೊಳ್ಳಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರು ತಿರುಗೇಟು ಕೊಟ್ಟಿದ್ದಾರೆ.

ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪರಕರಣಕ್ಕೆ ಸಂಬಂಧಿಸಿದಂತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇ ಗೌಡ (Devaraje Gowda) ಅವರು ಡಿಕೆಶಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಇದೀಗ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

ಪಾಪ ಬಿಜೆಪಿ-ಜೆಡಿಎಸ್ ಅವರು ಅವನನ್ನು ಬಳಸಿಕೊಂಡು ಏನ್ ಏನ್ ಬೇಕು ಮಾಡಿಸಿಕೊಳ್ತಾ ಇದ್ದಾರೆ. ಇದು ಹಾಸನ ಜಿಲ್ಲೆಗೆ ರಾಜ್ಯಕ್ಕೆ ಗೊತ್ತಿರೋ ವಿಚಾರವಾಗಿದೆ. ಅವರಿಗೆ ಅವಮಾನ ಆಗಿದೆ ಹಿಟ್ & ರನ್ ಮಾಡಿಕೊಂಡಿದ್ದಾರೆ. ಏನಾದ್ರು ಮಾಡಿ ಡೈವರ್ಟ್ ಮಾಡಬೇಕು ಮಾಡ್ತಾವ್ರೆ. ಅವನು ಮಾಡಲಿ ಅವನಿಗೆ ಹೇಳಿ ಕಳಿಸುತ್ತಿದ್ದವನು ಮಾಡಲಿ ಎಂದರು. ಇದನ್ನೂ ಓದಿ: ಪೆನ್‍ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ- ಡಿಕೆಶಿ ವಿರುದ್ಧ ದೇವರಾಜೇಗೌಡ ನೇರ ಆರೋಪ

ಅವನು ಹೇಳಿದ ಕೂಡಲೇ ಟಿವಿ ಚಾನಲ್ ಅವರಿಗೆ ಯಾರು ಕಾಲ್ ಮಾಡಿ ಮಾತನಾಡಿದ್ದಾರೆ ಎಲ್ಲ ನನಗೆ ಗೊತ್ತು. ಈ ಬ್ಲಾಕ್ ಮೇಲ್ ಗೆ ಎಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ಅಮಿತ್‌ ಶಾ, ಕುಮಾರಸ್ವಾಮಿ ಒಪ್ಪಿಕೊಂಡ ಮೇಲೆ ಎಲ್ಲಾ ಯಾಕೆ ಹರ್ಕೊತಾರೆ. ಇದರ ಹಿಂದೆ ಯಾರಿದ್ದಾರೆ, ಹಿನ್ನೆಲೆ ಗಾಯಕರು ಯಾರಿದ್ದಾರೆ ಮ್ಯೂಜಿಕ್ ಯಾರು ಮಾಡ್ತಾರೆ ಅನ್ನೋದು ಗೊತ್ತು ಎಂದು ಡಿಕೆಶಿ ಗರಂ ಆದರು.

ನಮಗೂ ಅವರಿಗೂ ಸಂಬಂಧ ಇಲ್ಲ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ ಅಂದ ಮೇಲೆ ಮತ್ಯಾಕೆ ಇದೆಲ್ಲ. ಯಾರು ಮಾಡಿಸುತ್ತಿದ್ದಾರೋ ಅವರೇ ಧೈರ್ಯ ಇದ್ದರೆ ಹೊರಗಡೆ ಬಂದು ಹೇಳಲಿ. ನನ್ನ ಮತ್ತು ಸಿಎಂ ಹೆಸರು ಹೇಳಿದ್ರೆ ಮಾತ್ರ ನೀವು ಸುದ್ದಿ ಮಾಡುವುದು ಹಾಗಾಗಿ ಹೇಳ್ತಾರೆ. ನನ್ನ ಹಾಗೂ ಸಿಎಂ ಹೆಸರು ಹೇಳಲಿ ಬಿಡಿ ಎಂದು ಹೇಳಿದರು.