ಮಹಾ ಕುಂಭಮೇಳದಲ್ಲಿ ಕಾಲ್ತುಳಿತ | ರಾಜ್ಯದ ಗಾಯಾಳುಗಳನ್ನು ಕರೆತರಲು ಅಗತ್ಯ ಕ್ರಮ: ಡಿಸಿಎಂ

ಬೆಂಗಳೂರು: ಪ್ರಯಾಗ್‌ರಾಜ್‌ನ (Prayagraj) ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ (Maha Kumbh Stampede) ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ವಿಷಾದ ವ್ಯಕ್ತಪಡಿಸಿದ್ದಾರೆ.

ಈ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಕಾಲ್ತುಳಿತದ ವಿಚಾರ ತಿಳಿದು ಬೇಸರವಾಗಿದೆ. ಘಟನೆಯಲ್ಲಿ ಹಲವರು ಜೀವಗಳನ್ನು ಕಳೆದುಕೊಂಡಿದ್ದಾರೆ. ಹಲವಾರು ಜನ ಗಾಯಗೊಂಡಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮಹಾಕುಂಭದಲ್ಲಿ ಭಾಗವಹಿಸಿರುವ ಕನ್ನಡಿಗರು ಸುರಕ್ಷಿತವಾಗಿರುವಂತೆ ಸಲಹೆ ನೀಡಿದ್ದಾರೆ. ಇನ್ನೂ, ಕರ್ನಾಟಕದ ಗಾಯಾಳುಗಳನ್ನು ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಕಾಲ್ತುಳಿತ ದುರಂತದಲ್ಲಿ ಬೆಳಗಾವಿಯ ತಾಯಿ ಹಾಗೂ ಮಗಳು ಸೇರಿ ನಾಲ್ವರು ಕನ್ನಡಿಗರು ಸಾವಿಗೀಡಾಗಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.