ಕ್ಯಾಚ್ ಬಿಟ್ಟು ಮ್ಯಾಚ್ ಸೋತ ಚೆನ್ನೈ – ಡೆಲ್ಲಿಗೆ 3 ವಿಕೆಟ್ ರೋಚಕ ಜಯ

ದುಬೈ: ಕ್ಯಾಚ್‌ ಕೈಚೆಲ್ಲಿದ ಸಿಎಸ್‌ಕೆ ಮ್ಯಾಚ್‌ ಸೋತಿದೆ. ಪಂದ್ಯದ 18ನೇ ಓವರ್‌ನ ಮೂರನೇ ಎಸೆತದಲ್ಲಿ ಡೆಲ್ಲಿ ತಂಡದ ಶಿಮ್ರಾನ್ ಹೆಟ್ಮಾಯೆರ್ ಹೊಡೆದ ಹೊಡೆತವನ್ನು ಕ್ಯಾಚ್ ಹಿಡಿಯಲು ವಿಫಲವಾದ ಚೆನ್ನೈ ತಂಡದ ಗೌತಮ್ ಅದನ್ನು ಬೌಂಡರಿಗೆ ಬಿಟ್ಟುಕೊಟ್ಟರು. ಇದರ ಲಾಭ ಪಡೆದ ಡೆಲ್ಲಿ ತಂಡ ಅಂತಿಮವಾಗಿ ಚೆನ್ನೈ ವಿರುದ್ಧ 3 ವಿಕೆಟ್‍ಗಳಿಂದ ಗೆದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

137 ರನ್‍ಗಳ ಗುರಿ ಬೆನ್ನು ಹತ್ತಿದ ಡೆಲ್ಲಿ ತಂಡ ಕೂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಪೃಥ್ವಿ ಶಾ 18 ರನ್ (12 ಎಸೆತ, 3 ಬೌಂಡರಿ) ಸಿಡಿಸಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಶ್ರೇಯಸ್ ಅಯ್ಯರ್ ಕೇವಲ 2 ರನ್‍ಗಳಿಗೆ ಸುಸ್ತಾದರೆ, ರಿಷಬ್ ಪಂತ್ 15 ರನ್ (12 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಶಿಖರ್ ಧವನ್ ಗೆಲುವಿಗಾಗಿ ಹೋರಾಟ ನಡೆಸಿದರು ಕೂಡ 39 ರನ್ (35 ಎಸೆತ, 3 ಬೌಂಡರಿ, 2ಸಿಕ್ಸ್) ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ಶಿಮ್ರಾನ್ ಹೆಟ್ಮಾಯೆರ್  ಅಜೇಯ 28 ರನ್ (18 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡಕ್ಕೆ ಗೆಲುವಿಗೆ ಕಾರಣರಾದರು. ಇದನ್ನೂ ಓದಿ: ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

ಚೆನ್ನೈ ಪರ ಶಾರ್ದೂಲ್ ಠಾಕೂರ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಕಿತ್ತರೆ, ಜೋಶ್ ಹೇಜಲ್‍ವುಡ್, ದೀಪಕ್ ಚಹರ್, ಬ್ರಾವೋ ತಲಾ 1 ವಿಕೆಟ್ ಪಡೆದರು.

ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಚೆನ್ನೈ ತಂಡ ಆರಂಭಿಕ ಆಘಾತಕ್ಕೆ ಒಳಗಾಯಿತು. ಆರಂಭಿಕ ಆಟಗಾರರಾದ ಋತುರಾಜ್ ಗಾಯಕ್ವಾಡ್ 13 ರನ್ (13 ಎಸೆತ, 2 ಬೌಂಡರಿ) ಮತ್ತು ಫಾಫ್ ಡು ಪ್ಲೆಸಿಸ್ 10 ರನ್ (8 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗುವ ಮೂಲಕ ಉತ್ತಮ ಆರಂಭವನ್ನು ನೀಡಲು ವಿಫಲವಾದರು. ಬಳಿಕ ಬಂದ ಕನ್ನಡಿಗ ರಾಬಿನ್ ಉತ್ತಪ್ಪ 19 ರನ್ (19 ಎಸೆತ, 1 ಬೌಂಡರಿ) ಬಾರಿಸಿ ಅಶ್ವಿನ್ ಸ್ಪೀನ್ ಮೋಡಿಗೆ ವಿಕೆಟ್ ಒಪ್ಪಿಸಿದರು. ಇದನ್ನೂ ಓದಿ: ಹೈದಾರಾಬಾದ್‍ಗೆ ಬೇಡವಾದ ಡೇವಿಡ್ ವಾರ್ನರ್

ರಾಯುಡು ಅರ್ಧಶತಕ: ಚೆನ್ನೈ ತಂಡ 59 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದಾಗ ಒಂದಾದ ಅಂಬಾಟಿ ರಾಯುಡು ಮತ್ತು ಮಹೇಂದ್ರ ಸಿಂಗ್ ಧೋನಿ 5ನೇ ವಿಕೆಟ್‍ಗೆ 70 ರನ್ (64 ಎಸೆತ)ಗಳ ಜೊತೆಯಾಟವಾಡಿತು. ಧೋನಿ 18 ರನ್ (27 ಎಸೆತ) ಅವೇಶ್ ಖಾನ್‍ಗೆ ವಿಕೆಟ್ ಒಪ್ಪಿಸಿದರೆ, ರಾಯುಡು ತಂಡಕ್ಕೆ ಆಸರೆಯಾಗುವ ಜೊತೆಗೆ 55 ರನ್ (43 ಎಸೆತ, 5 ಬೌಂಡರಿ, 2 ಸಿಕ್ಸ್) ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ನಿಗದಿತ ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 136ರನ್ ಗಳಿಸಿತು.

ಡೆಲ್ಲಿ ಪರ ಅಕ್ಷರ್ ಪಟೇಲ್ 2 ವಿಕೆಟ್ ಪಡೆದರೆ, ಅವೇಶ್ ಖಾನ್, ಅನ್‌ರಿಚ್ ನಾಟ್ರ್ಜೆ, ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಹಂಚಿಕೊಂಡರು.

Comments

Leave a Reply

Your email address will not be published. Required fields are marked *