ಬಸವನ ಬಾಗೇವಾಡಿಯ ಗ್ರಾಮದಲ್ಲಿ ಸಿಕ್ಕಿದ್ದು ವಿವಿಪ್ಯಾಟ್ ಖಾಲಿ ಬಾಕ್ಸ್!

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿಯ ಮನಗೂಳಿ ಗ್ರಾಮದಲ್ಲಿ ದೊರೆತಿರುವುದು ವಿವಿಪ್ಯಾಟ್ ಖಾಲಿ ಬಾಕ್ಸ್ ಗಳು ಮಾತ್ರ ಎಂದು ವಿಜಯಪುರ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸುದ್ದಿ ಪ್ರಸಾರವಾದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಈ ವೇಳೆ, ರಸ್ತೆ ಕಾಮಗಾರಿಗಾಗಿ ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ಶೆಡ್ ಒಂದರಲ್ಲಿ 8 ವಿವಿಪ್ಯಾಟ್ ಖಾಲಿ ಬಾಕ್ಸ್ ಗಳು ಮಾತ್ರ ದೊರೆತಿವೆ. ಅಲ್ಲದೆ ಸ್ಥಳದಲ್ಲಿ ಯಾವುದೇ ವಿವಿಪ್ಯಾಟ್ ಯಂತ್ರಗಳು ಲಭ್ಯವಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸ್ಟ್ರಾಂಗ್ ರೂಂನಲ್ಲಿರಬೇಕಿದ್ದ ವಿವಿಪ್ಯಾಟ್ ಬಾಕ್ಸ್ ಗಳು ರಸ್ತೆಬದಿಯ ಶೆಡ್‍ನಲ್ಲಿ ಪತ್ತೆ – ಚುನಾವಣಾ ಅಕ್ರಮ ಶಂಕೆ!

ಲಭ್ಯವಾಗಿರುವ ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳ ಮೇಲೆ ಯಾವುದೇ ಯೂನಿಕ್ ಐಡಿ ನಂಬರ್ ಇರುವುದಿಲ್ಲ. ಹಾಗೆಯೇ, ಈ ಖಾಲಿ ಬಾಕ್ಸ್ ಗಳು ವಿಜಯಪುರ ಜಿಲ್ಲೆಗೆ ಸಂಬಂಧಿಸಿರುವುದಿಲ್ಲ. ಅಲ್ಲದೆ, ಜಿಲ್ಲೆಗೆ ಹಂಚಿಕೆಯಾಗಿದ್ದ 2,744 ವಿವಿಪ್ಯಾಟ್ ಗಳು ಸುರಕ್ಷಿತವಾಗಿದ್ದು, ಸ್ಟ್ರಾಂಗ್ ರೂಂನಲ್ಲಿ ಭದ್ರಪಡಿಸಿಟ್ಟುಕೊಳ್ಳಲಾಗಿದೆ. ದೊರೆತಿರುವ ವಿವಿಪ್ಯಾಟ್ ನ ಖಾಲಿ ಬಾಕ್ಸ್ ಗಳಿಗೆ ಸಂಬಂಧಿಸಿದಂತೆ ಬಸವನ ಬಾಗೇವಾಡಿಯ ತಹಶೀಲ್ದಾರ್ ಅವರಿಗೆ ಎಫ್‍ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:
ಚುನಾವಣೆಯಲ್ಲಿ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದ ವಿವಿ ಪ್ಯಾಟ್ ದೃಢೀಕರಣ ಬಾಕ್ಸ್ ಗಳು ಹೆದ್ದಾರಿ ಪಕ್ಕದ ಶೆಡ್‍ನಲ್ಲಿ ಪತ್ತೆಯಾಗಿದ್ದು, ಚುನಾವಣೆಯ ಆಕ್ರಮ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದರು. ರಾಷ್ಟ್ರೀಯ ಹೆದ್ದಾರಿ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಬಳಿ ರಸ್ತೆ ಕಾಮಗಾರಿ ನಡೆಸುವ ಕಾರ್ಮಿಕರು ವಾಸಿಸುವ ಶೆಡ್ ನಲ್ಲಿ ವಿವಿ ಪ್ಯಾಟ್ ಖಾಲಿ ಬಾಕ್ಸ್ ಗಳು ಪತ್ತೆಯಾಗಿವೆ. ಇದರಲ್ಲಿ ಕಾರ್ಮಿಕರು ಆಹಾರ ಪದಾರ್ಥ, ಬಟ್ಟೆಗಳನ್ನು ಸಂಗ್ರಹಿಸಿದ್ದರು.

ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಇವುಗಳನ್ನು ಪತ್ತೆ ಮಾಡಿದ್ದು ಚುನಾವಣೆಯಲ್ಲಿ ಆಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದಾರೆ. ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿದ್ದರು.

Comments

Leave a Reply

Your email address will not be published. Required fields are marked *