ಬೆಳಗ್ಗೆ ಸ್ಕೆಚ್, ರಾತ್ರಿ ದರೋಡೆ- ಕಿತ್ತೂರು ಚೆನ್ನಮ್ಮನ ನಾಡಲ್ಲಿ ಕಳ್ಳರ ಕರಾಮತ್ತು

– ಲಾಂಗ್‍ಗೆ ಹೆದರಿ ರೌಂಡ್ಸ್ ಬಿಟ್ಟ ಪೊಲೀಸ್ರು

ಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಡಿದ ವೀರ ರಾಣಿ ಕಿತ್ತೂರು ಚೆನ್ನಮ್ಮನ ನಾಡು. ಇಂತಹ ವೀರರಾಣಿ ಕಿತ್ತೂರ ಚೆನ್ನಮ್ಮನ ನಾಡಿನಲ್ಲಿ ಈಗ ಕಳ್ಳರ ಹಾವಳಿ ಹೆಚ್ಚಾಗಿದೆ. ನಿತ್ಯವೂ ಒಂದಲ್ಲಾ ಒಂದು ಕಳ್ಳತನವಾಗುತ್ತಿದ್ದು ಜನರು ಹಾಗೂ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.

ಹೌದು. ಕಳೆದ 2 ತಿಂಗಳಿನಿಂದ ಕಿತ್ತೂರಿನಲ್ಲಿ ಕಳ್ಳರ ಹಾವಳಿ ಮಿತಿಮೀರಿದೆ. ಒಂದೇ ವಾರದಲ್ಲಿ 3 ರಿಂದ 4 ದಿನ ನಿರಂತರ ಈ ರೀತಿ ಕಳ್ಳತನ ನಡೆಯುತ್ತಿದೆ. ಇವರಿಗೆ ಯಾವುದೇ ರೀತಿ ಪೊಲೀಸರ ಭಯ ಕೂಡ ಇಲ್ಲದಂತಾಗಿದೆ. ಬೆಳಗ್ಗೆ ಬಿಲ್ಡಿಂಗ್ ನೋಡಿ ಸ್ಕೇಚ್ ಹಾಕುವ ಖದೀಮರು ರಾತ್ರಿ ಟಾಟಾ ಏಸ್ ವಾಹನಗಳಲ್ಲಿ ಬರುತ್ತಾರೆ. ಸ್ಕೇಚ್ ಹಾಕಿದ್ದ ಅಂಗಡಿ ಅಥವಾ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಾರೆ. ಕೈಯಲ್ಲಿ ಮಚ್ಚು ಲಾಂಗು ರಾಡ್ ಹಿಡಿದುಕೊಂಡು ಬರುವ ಈ ಗ್ಯಾಂಗ್ ಮೊದಲು ಇಬ್ಬರು ಎಂಟ್ರಿ ಕೊಡುತ್ತಾರೆ. ಆದಾದ ಬಳಿಕ ಮತ್ತೆ ಇಬ್ಬರು ಬಂದು ಅಂಗಡಿಯ ಶೆಟರ್ ಮುರಿದು ಒಳ್ಳ ನುಗ್ಗುತ್ತಾರೆ. ಆಗ ಇಬ್ಬರು ಒಳಗೆ ನುಗಿದ್ದರೆ, ಇನ್ನಿಬ್ಬರು ಹೊರಗೆ ಕಾವಲು ಕಾಯುತ್ತಾರೆ.

ಇವರ ಮುಖ್ಯ ಟಾರ್ಗೆಟ್ ಬಾರ್ & ರೆಸ್ಟೋರೆಂಟ್. ಬಾರ್‍ಗಳಿಗೆ ನುಗ್ಗೋ ಈ ಖದೀಮರು ಹಣದ ಜೊತೆ ಹೆಂಡವನ್ನೂ ದೋಚುತ್ತಾರೆ. ಬಾರ್‍ನಲ್ಲಿ ಕಳ್ಳತನ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೂ, ಪೊಲೀಸರು ಮಾತ್ರ ಏನೂ ಮಾಡುತ್ತಿಲ್ಲ ಎಂದು ಬಾರ್ ಮಾಲೀಕ ಪ್ರಶಾಂತ್ ಆರೋಪಿಸಿದ್ದಾರೆ.

ಈಗಾಗಲೇ 6ಕ್ಕೂ ಹೆಚ್ಚು ಬಾರ್ ಗಳ ದರೋಡೆ, ಸುಮಾರು 15 ಮನೆಗಳಲ್ಲಿ ಕಳ್ಳತನವಾಗಿದೆ. ಅಂಗಡಿ, ಮನೆ ಮಾಲೀಕರು ಕೇಸ್ ಕೊಟ್ಟರೂ ಪೊಲೀಸರು ತೆಗೆದುಕೊಳ್ಳುತ್ತಿಲ್ಲ ಅನ್ನೋ ಆರೋಪ ಇದೆ. ಜೊತೆಗೆ, ರಾತ್ರಿ ವೇಳೆ ಮಚ್ಚು ಲಾಂಗು ಹಿಡಿದು ಖದೀಮರು ಓಡಾಡುತ್ತಿರುವುದರಿಂದ ಪೊಲೀಸರೂ ಹೆದರಿದ್ದು ರೌಂಡ್ಸ್ ಕೂಡ ಹೋಗುತ್ತಿಲ್ಲ.

ಒಟ್ಟಿನಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ನಾಡಿನಲ್ಲಿ ಇಂದು ಭಯದಲ್ಲಿ ಜನರು ಓಡಾಡುವ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.

Comments

Leave a Reply

Your email address will not be published. Required fields are marked *