ದಾವೂದ್ ಇಬ್ರಾಹಿಂ ಒಡೆತನದಲ್ಲಿದ್ದ ಹೋಟೆಲ್ ಇನ್ನು ಸಾರ್ವಜನಿಕ ಶೌಚಾಲಯ..!

ಮುಂಬೈ: ಭೂಗತ ಪಾತಕಿ ಹಾಗೂ ಮುಂಬೈ ಸ್ಫೋಟದ ರುವಾರಿ ದಾವೂದ್ ಇಬ್ರಾಹಿಂ ಒಡೆತನದಲ್ಲಿದ್ದ ಮುಂಬೈನ ಹೋಟೆಲ್‍ವೊಂದು ಕೆಲವೇ ದಿನಗಳಲ್ಲಿ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಯಾಗಲಿದೆ.

ಈ ಹಿಂದೆ ಹಿಂದೂ ಮಹಾ ಸಭಾ ದಾವೂದ್ ಇಬ್ರಾಹಿಂ ಬಳಸುತ್ತಿದ್ದ ಕಾರನ್ನು ಹರಾಜಿನಲ್ಲಿ ಖರೀದಿಸಿ ನಂತರ ಅದನ್ನು ಸುಟ್ಟು ಹಾಕಿತ್ತು. ಈ ಬಾರಿ ನಡೆಯುವ ಹರಾಜಿನಲ್ಲಿ ದಾವೂದ್ ಒಡೆತನದಲ್ಲಿದ್ದ ಹೋಟೆಲ್ ನ್ನು ಖರೀದಿಸಿಲು ಹಿಂದೂ ಮಹಾಸಭಾ ನಿರ್ಧರಿಸಿದೆ. ನಂತರ ಈ ಕಟ್ಟಡವನ್ನು ಸಾರ್ವಜನಿಕ ಶೌಚಾಲಯವಾಗಿ ಪರಿವರ್ತಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ದಾವೂದ್ ಇಬ್ರಾಹಿಂ ನೆಲೆಸಿದ್ದ ಸಂದರ್ಭದಲ್ಲಿ ಬಳಕೆ ಮಾಡಲಾಗಿದ್ದ ಹಲವು ಬೆಲೆಬಾಳುವ ಸ್ವತ್ತುಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಈ ಸ್ವತ್ತುಗಳನ್ನು ನವೆಂಬರ್ 14 ರಂದು ಹರಾಜು ನಡೆಸಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ ಮುಂಬೈನ ಪ್ರಮುಖ ಸ್ಥಳ `ದಿಲ್ಲಿ ಝೈಕಾ’ ಎಂದು ಪ್ರಸಿದ್ಧಿ ಪಡೆದಿರುವ `ಹೋಟೆಲ್ ರೌನಕ್ ಅಫ್ರೋಜ್’ ಕಟ್ಟಡವನ್ನು ಹರಾಜು ಮಾಡಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿಯವರು, ದಾವೂದ್ ಒಡೆತನದಲ್ಲಿದ್ದ ಕಟ್ಟಡವನ್ನು ಸಾರ್ವಜನಿಕ ಶೌಚಾಲವಾಗಿ ಪರಿವರ್ತನೆ ಮಾಡಿ ಸಾರ್ವಜನಿಕರಿಗೆ ಇದನ್ನು ಬಳಸಲು ಉಚಿತವಾಗಿ ನೀಡಲಾಗುತ್ತದೆ. ಈ ಮೂಲಕ ಭಾರತದಲ್ಲಿ ಭಯೋತ್ಪಾದನೆ ನಡೆಸಿದರೆ ಯಾವ ಸ್ಥಿತಿ ಬರುತ್ತದೆ ಎಂಬ ಸಂದೇಶವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೇ ಕಟ್ಟಡವನ್ನು ಸಾರ್ವಜನಿಕ ಶೌಚಾಲಯವಾಗಿ ಪರವರ್ತನೆ ಮಾಡಿದ ಬಳಿಕ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರಿಂದ ಇದನ್ನು ಉದ್ಘಾಟನೆ ಮಾಡಿಸಲಾಗುತ್ತದೆ ಎಂದು ಹೇಳಿದರು.

 

Comments

Leave a Reply

Your email address will not be published. Required fields are marked *