ಲಾಕ್‍ಡೌನ್ ಉಲ್ಲಂಘಿಸಿದವರ ಕೈಗೆ ಸ್ಲೇಟ್ ಕೊಟ್ಟು ಜಾಗೃತಿ

ದಾವಣಗೆರೆ: ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಹೊರಗಡೆ ತಿರುಗುತ್ತಿದ್ದವರನ್ನು ಎಳೆತಂದ ದಾವಣಗೆರೆ ಪೊಲೀಸರು ಅವರ ಕೈಗೆ ಸ್ಲೇಟ್ ಕೊಟ್ಟು ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಕೊರೊನಾ ಭಯದಿಂದ ದೇಶವೇ ಲಾಕ್‍ಡೌನ್ ಆಗಿದೆ. ಅನಗತ್ಯವಾಗಿ ಹೊರಗೆ ಬರಬೇಡಿ ಎಂದು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸರು ಮನವಿ ಮಾಡುತ್ತಿದ್ದಾರೆ. ಹೀಗಾದರೂ ದಾವಣಗೆರೆಯಲ್ಲಿ ನೂರಕ್ಕೂ ಅಧಿಕ ಮಂದಿ ಹೊರಗೆ ಬಂದು ಕಾನೂನು ಉಲ್ಲಂಘಿಸಿದವರನ್ನು ವಶಕ್ಕೆ ಪಡೆದಿದ್ದಾರೆ.

ಹೊರಗಡೆ ಬಂದು ಸುಖಾಸುಮ್ಮನೆ ತಿರುಗುತ್ತಿದ್ದ ಜನರನ್ನು ಹೆಡೆಮುರಿ ಕಟ್ಟಿ ಕ್ವಾರಂಟೈನ್ ಘಟಕಕ್ಕೆ ಎಳೆತಂದ ಪೊಲೀಸ್ ಇಲಾಖೆ ಅವರ ಕೈಗೆ ಜಾಗೃತಿ ಬರಹಗಳನ್ನು ಬರೆದಿರುವ ಸ್ಲೇಟ್ ಕೊಟ್ಟು ಜಾಗೃತಿ ಮೂಡಿಸಿದ್ದಾರೆ. “ಮತ್ತೆ ಈ ರೀತಿ ಕಾನೂನು ಉಲ್ಲಂಘಿಸಲ್ಲ, ಕ್ಷಮಿಸಿ ನಾನು ಲಾಕ್‍ಡೌನ್ ಉಲ್ಲಂಘಿಸಿದ್ದೇನೆ” ಎಂಬುದಾಗಿ ಸ್ಲೇಟ್‍ಗಳ ಮೇಲೆ ಬರೆಯಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ಎಸ್ಪಿ ಹನುಮಂತರಾಯ, ಎಷ್ಟೇ ಜಾಗೃತಿ ಮೂಡಿಸಿದರೂ ಜನ ಹೊರ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅನಗತ್ಯ ತಿರುಗಾಟ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಿದ್ದೇವೆ. ಈಗಾಗಲೇ ಸುಮ್ಮನೆ ಹೊರ ಬಂದ 590 ವಾಹನಗಳನ್ನು ಸೀಜ್ ಮಾಡಿದ್ದೇವೆ. ಅಗತ್ಯ ವಸ್ತು ಕೊಳ್ಳುವವರಿಗೆ ಮಾತ್ರ ಬಿಟ್ಟಿದ್ದೇವೆ. ಉಳಿದವರಿಗೆ ಇದು ಎಚ್ಚರಿಕೆ ಗಂಟೆ ಎಂದು ವಾರ್ನಿಂಗ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *