ಸಿದ್ದರಾಮಯ್ಯರ ಧಿಮಾಕಿನ ಮಾತಿಗೆ ಬೆಲೆಯಿಲ್ಲ: ಬಿಎಸ್‌ವೈ

ದಾವಣಗೆರೆ: ಸಿದ್ದರಾಮಯ್ಯ ಅವರು ವಿಪಕ್ಷದ ನಾಯಕರೆಂಬುದನ್ನು ಮರೆತು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಸೊಕ್ಕಿನ, ಧಿಮಾಕಿನ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆಯ ಆನಗೋಡು ಗ್ರಾಮದಲ್ಲಿ ನಡೆದ ಪರಿಷತ್ ಚುನಾವಣೆಯ ಪ್ರಚಾರ ಸಭೆಗೆ ಹಾಜರಾಗುವ ಮುನ್ನ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಎನ್ನುವುದನ್ನು ಮರೆತಿದ್ದಾರೆ. ಫಲಿತಾಂಶ ನಂತರ ಅವರಿಗೆ ತಿಳಿಯುತ್ತದೆ. ಅವರ ಮಾತುಗಳಿಗೆ ಯಾರು ಬೆಲೆ ಕೊಡುವುದಿಲ್ಲ, ಮತದಾರರು ಇದೀಗ ಜಾಗೃತರಾಗಿದ್ದಾರೆ. ಅವರಿಗೆ ಯಾವುದು ಸರಿ ಯಾವುದು ತಪ್ಪು ಎಂದು ತಿಳಿಯುತ್ತಿದೆ ಎಂದು ಟಾಂಗ್ ನೀಡಿದರು.

ಮೈಸೂರಿನ ಚಾಮುಂಡೇಶ್ವರಿ ಮತ ಕ್ಷೇತ್ರದಲ್ಲಿ ಸೋತ ಸಿದ್ದರಾಮಯ್ಯ ಅವರು ಇಷ್ಟೊಂದು ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುವಂತದ್ದಲ್ಲ. ಸೋತರೂ ಬುದ್ಧಿ ಕಲಿಯದ ಸಿದ್ದರಾಮಯ್ಯ ಇನ್ನಾದರೂ ಗೌರವಯುತವಾಗಿ ಮಾತನಾಡುವುದನ್ನು ಕಲಿಯಬೇಕಾಗಿದೆ ಎಂದರು.

ಸಂಪುಟ ಪುನರಚನೆ ಮಾಡುವುದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಿಟ್ಟ ವಿಚಾರವಾಗಿದೆ. ಯಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಸಿಎಂ ನಿರ್ಧರಿಸುತ್ತಾರೆ. ಸಂಪುಟ ಪುನರ್‌ರಚನೆಯಾಗ ಬಹುದೆಂಬ ನಿರೀಕ್ಷೆ ಇದೆ. ಇನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳಿಲ್ಲದ ಸ್ಥಳದಲ್ಲಿ ಬೆಂಬಲಿಸುವಂತೆ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಹೆಚ್‌ಡಿ ದೇವೇಗೌಡ ಅವರು ಭೇಟಿ ಆಗಿರುವುದರಲ್ಲಿ ಯಾವುದೇ ರಾಜಕೀಯ ಇಲ್ಲ. ಚುನಾವಣೆಗೂ, ಈ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

ಪರಿಷತ್ ಚುನಾವಣೆಯಲ್ಲಿ ನಾವು 15 ಸ್ಥಾನ ಗೆಲ್ಲುತ್ತೇವೆ. ಬುದ್ಧಿವಂತ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂಬ ನಂಬಿಕೆ ಇದೆ. ಕೇವಲ ಹಣದ ಬಲದಿಂದ ಚುನಾವಣೆ ಗೆಲ್ಲುತ್ತೇನೆ ಎಂದು ಹೋದರೆ ಅವರು ಬೆಂಗಳೂರಿಗೆ ಹೋಗಬೇಕಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್‌ಗೆ ಟಾಂಗ್ ನೀಡಿದರು. ಇದನ್ನೂ ಓದಿ: ಮದುವೆ ಆಗುವುದಾಗಿ ನಂಬಿಸಿ ವಂಚನೆ- ಸಿಸಿಎಫ್ ಮೇಲೆ ದೂರು

Comments

Leave a Reply

Your email address will not be published. Required fields are marked *