ಚುನಾವಣೆ ಬಂದ್ರೆ ಸಾಕು ಪಾಕಿಸ್ತಾನದ ಮೇಲೆ ಬಾಂಬ್ ಹಾಕ್ತಾರೆ: ಶಾಮನೂರು ವ್ಯಂಗ್ಯ

ದಾವಣಗೆರೆ: ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತಿದೆ. ಪ್ರಧಾನಿಯವರು ಇದನ್ನು ಸರಿಪಡಿಸಬೇಕು ಇಲ್ಲದಿದ್ದರೆ ಬಿಜೆಪಿ ಲೆಸ್ ಭಾರತವಾಗುತ್ತೆ ಎಂಬ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿಕೆ ಪುನರುಚ್ಚರಿಸುವ ಮೂಲಕ ಶಾಸಕ ಶಾಮನೂರು ಶಿವಶಂಕರಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಸಂವಿಧಾನ ಸಂರಕ್ಷಣೆ ಸಮಿತಿಯಿಂದ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ, ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಖಂಡಿಸಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಆಡಳಿತದಲ್ಲಿ ಪಾಕ್ ಮೇಲೆ ಬಾಂಬ್ ಹಾಕಿ ದಾಳಿ ಮಾಡುತ್ತಾರೆ. ಆಗ ಮಾತ್ರ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರಿಗೆ ಜಾರ್ಖಂಡ್ ಚುನಾವಣೆ ಒಳ್ಳೆ ಪಾಠ ಕಲಿಸಿದೆ. ಈಗಾಗಲೇ ಬಿಜೆಪಿ ಏಳು ರಾಜ್ಯ ಕಳೆದುಕೊಂಡಿದೆ. ಇಬ್ಬರ ಸರ್ವಾಧಿಕಾರಿ ಧೋರಣೆ ಹೆಚ್ಚು ದಿನ ನಡೆಯಲ್ಲ. ಈ ಕಾಯ್ದೆಯನ್ನ ವಾಪಸ್ ಪಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯಲ್ಲಿ ಆರ್.ಎಸ್.ಎಸ್ ನವರು ಪಾಲ್ಗೊಂಡಿರಲಿಲ್ಲ, ಅವರೇ ದೇಶ ವಿರೋಧಿಗಳು. ಹೊರದೇಶಗಳಲ್ಲಿ ಹಲವು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅಲ್ಲೂ ಸಹ ಇಂಥದೇ ಕಾಯ್ದೆ ಜಾರಿಗಳಿಸಿದರೆ ಅಲ್ಲಿಂದ ವಾಪಸ್ ಬರುವ ಜನರಿಗೆ ಪಕೋಡಾ ಮಾಡೋಕೆ ಹಂಚುತ್ತೀರಾ ಎಂದು ಪ್ರಧಾನಿ ಮೋದಿ ಅವರನ್ನು ಏಕವಚನದಲ್ಲಿ ಲೇವಡಿ ಮಾಡಿದರು.

ದೇಶದ ನಿರುದ್ಯೋಗಿಗಳಿಗೆ ಮೋದಿ, ಉದ್ಯೋಗ ಕಲ್ಪಿಸಿಲ್ಲ. ಆದರೂ ಮೋದಿ ಮೋದಿ ಅಂತ ಬಡ್ಕೋತ್ತಾರೆ. ನಾಚಿಕೆ ಆಗಲ್ವಾ ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ವಾಗ್ದಾಳಿ ಮಾಡಿದರು.

Comments

Leave a Reply

Your email address will not be published. Required fields are marked *