ನಾನ್ ಏನೇ ಮಾತಾಡಿದ್ರೂ ವಿವಾದ ಆಗುತ್ತೆ- ರೇಣುಕಾಚಾರ್ಯ

– ಉಮೇಶ್ ಕತ್ತಿಗೆ ಟಾಂಗ್ ಕೊಡಲ್ಲ

ದಾವಣಗೆರೆ: ಶಾಸಕ ಉಮೇಶ್ ಕತ್ತಿ ಸಿಎಂ ಆಗುವ ಕನಸು ಕಾಣುವುದರಲ್ಲಿ ತಪ್ಪೇನಿಲ್ಲ. ಆದರೆ ಈಡೇರಬೇಕಲ್ವಾ? ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಈ ವಿಚಾರವಾಗಿ ನಾನು ಉಮೇಶ್ ಕತ್ತಿ ಅವರಿಗೆ ಟಾಂಗ್ ಕೊಡುವುದಿಲ್ಲ. ನಾನ್ ಏನೇ ಮಾತನಾಡಿದರೂ ವಿವಾದವಾಗುತ್ತದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ನಾನು ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಆತ್ಮೀಯ ಸ್ನೇಹಿತರು. ಒಂದು ಗಂಟೆಗಳ ಕಾಲ ಬೆಂಗಳೂರಿನಲ್ಲಿ ಚರ್ಚೆ ನಡೆಸಿದ್ದೇನೆ. ಅಭ್ಯರ್ಥಿ ಸೋಲಿಸುವ ಕೀಳು ರಾಜಕೀಯ ಮಾಡಲು ಹೋಗುವುದಿಲ್ಲ. ಪಕ್ಷದ ಅಭ್ಯರ್ಥಿ ಸೋಲಿಸಿದರೆ ತಾಯಿಗೆ ಮೋಸ ಮಾಡಿದಂತೆ. ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದೇವೆ. ನಮ್ಮ ಅಭ್ಯರ್ಥಿ ಸೋಲನ್ನು ಯಾವತ್ತೂ ಬಯಸುವುದಿಲ್ಲ ಎಂದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಯಾವುದೇ ರಾಜಕೀಯ ಉದ್ದೇಶದಿಂದ ಭೇಟಿ ಮಾಡಿಲ್ಲ. ಈ ಬಗ್ಗೆ ಚರ್ಚೆ ಕೂಡ ಮಾಡಿಲ್ಲ. ಆದರೆ ಮಾಧ್ಯಮಗಳಲ್ಲಿ ಏನೇನೋ ಸುದ್ದಿ ಬಂದಿದೆ. ಇದು ಸತ್ಯಕ್ಕೆ ದೂರವಾದದ್ದು. ಹೊನ್ನಾಳಿಯಲ್ಲಿ ಮುಂದಿನ ತಿಂಗಳು ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಬರುವಂತೆ ಮನವಿ ಮಾಡಿದ್ದೇನೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಿದ್ದೇನೆ ಅಷ್ಟೇ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರಿಂದ ಸಿಎಂ ಯಡಿಯೂರಪ್ಪ ಅವರು ಟೆನ್ಶನ್ ಆಗಿಲ್ಲ. ನಾಲ್ಕು ಬಾರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ರಾಜಕೀಯದಲ್ಲಿ ಅಪಾರ ಅನುಭವವಿದೆ. ಎಲ್ಲವನ್ನೂ ನಿಭಾಯಿಸುವ ಶಕ್ತಿ ಅವರಲ್ಲಿದೆ. ತಾಳ್ಮೆಯಿಂದ ಎಲ್ಲವನ್ನೂ ಬಗೆಹರಿಸುತ್ತಾರೆ. ನಾನು ರಾಜಕೀಯದಲ್ಲಿ ಚಿಕ್ಕವನು ಎಂದು ಹೇಳಿದರು.

Comments

Leave a Reply

Your email address will not be published. Required fields are marked *