ಕಳಪೆ ಕಾಮಗಾರಿಯಿಂದ ಸೌಂದರ್ಯ ಕಳೆದುಕೊಳ್ಳುತ್ತಿದೆಯೇ ದಾವಣಗೆರೆಯ ಗ್ಲಾಸ್ ಹೌಸ್?

ದಾವಣಗೆರೆ: ಕ್ಯೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ ಈಗ ಕಳಪೆ ಕಾಮಗಾರಿಯಿಂದ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ.

ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಆಕರ್ಷಕವಾದ ಗಾಜಿನ ಮನೆ ಇದಾಗಿದ್ದು, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಜಿ ಸಿ ಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದರು. ಇಡೀ ರಾಜ್ಯಕ್ಕೆ ಈ ಗಾಜಿನ ಮನೆ ಒಂದು ಪ್ರವಾಸಿ ತಾಣವಾಗುತ್ತೆ ಎನ್ನುವ ದೃಷ್ಟಿಯನ್ನು ಇಟ್ಟುಕೊಂಡು ಗಾಜಿನ ಮನೆಯನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೆ ಲೋಕಾರ್ಪಣೆಗೊಂಡು ಮೂರು ತಿಂಗಳಾಗಿಲ್ಲ. ಆಗ್ಲೇ ತನ್ನ ಕಳಪೆ ಕಾಮಗಾರಿಯ ನಿಜ ಸ್ವರೂಪ ಬಯಲಾಗುತ್ತಿದೆ.

ಸುಮಾರು 13.35 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಗಾಜಿನ ಮನೆ ಬೆಂಗಳೂರು ಲಾಲ್ ಬಾಗ್ ನ ಗಾಜಿನ ಮನೆಗಿಂತ ದೊಡ್ಡದಾಗಿದ್ದು, ಸುಂದರ ಗಾಜಿನ ಅರಮನೆ ಲೋಕಾರ್ಪಣೆಗೊಂಡು ಮೂರು ತಿಂಗಳಾಗಿಲ್ಲ ಆಗ್ಲೆ ಅರಮನೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ದೇಶದ ಅತ್ಯಂತ ದೊಡ್ಡ ಗಾಜಿನ ಅರಮನೆ ಇಂದು ಲೋಕಾರ್ಪಣೆ

ಇದು ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಾಣವಾಗಿದ್ದು, ಗಾಜಿನಿಂದ ಗಾಜಿಗೆ ಹಾಕಿರುವ ನಟ್, ಬೋಲ್ಟ್ ಗಳು ಕಳಚಿ ಬಿದ್ದಿವೆ. ಮೇಲ್ಛಾವಣಿಗೆ ಹೊದಿಸಿದ್ದ ಗಾಜು ಪುಡಿಪುಡಿಯಾಗಿದ್ದು, ಅಲ್ಲಿಂದ ನೀರು ಸೋರುತ್ತಿವೆ. ಮಳೆ ಬಂದ್ರೆ ಸಾಕು ಅರಮನೆಯ ಒಳಗೆ ಕೆರೆ ನಿರ್ಮಾಣವಾಗುತ್ತೆ. ಇಲ್ಲಿಗೆ ಬರುವ ಪ್ರವಾಸಿಗರು ಅವ್ಯವಸ್ಥೆ ಹಾಗೂ ಕಳೆಪೆ ಕಾಮಗಾರಿ ನೋಡಿ ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿದ್ದ ಎಸ್.ಎಸ್ ಮಲ್ಲಿಕಾರ್ಜುನ್ ಅವರ ಕನಸಿನ ಯೋಜನೆಯಾಗಿದ್ದು, ಇದೀಗ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ. ಎಸ್.ಎಸ್.ಮಲ್ಲಿಕಾರ್ಜುನ್ ಕೂಡ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಇಲ್ಲದಂತಾಗಿದೆ. ಸುಂದರವಾದ ಗಾಜಿನ ಅರಮನೆ ದೇವನಗರಿಗೆ ಮುಕುಟಪ್ರಾಯವಾಗಿತ್ತು. ಆದ್ರೆ ಇದೀಗ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅರಮನೆ ಶಿಥಿಲಗೊಳ್ಳುತ್ತಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ದುರಸ್ತಿಗೊಳಿಸಬೇಕು ಹಾಗೂ ಕಳಪೆ ಕಾಮಗಾರಿ ಮಾಡಿದವರವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Comments

Leave a Reply

Your email address will not be published. Required fields are marked *