ಅಸೆಂಬ್ಲಿ ಎಲೆಕ್ಷನ್ ಸೋಲಿಗೆ ಕಾಂಗ್ರೆಸ್ ಸೇಡು-ಬಿಜೆಪಿಗೆ ವೋಟ್ ಬಿದ್ದಿರೋ ಕಡೆ ನೀರು ಪೂರೈಕೆ ಇಲ್ಲ!

ದಾವಣಗೆರೆ: ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಗದ್ದುಗೆ ಹಿಡಿದವರು ನಗರದ ಅಭಿವೃದ್ಧಿ ಅದೂ-ಇದೂ ಅಂತ ಮಾತಾಡ್ತಾ ಇದ್ರೆ, ಸೋತ ಅಭ್ಯರ್ಥಿಯ ಬೆಂಬಲಿಗರು ಮತದಾರರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಹೌದು. ದಾವಣಗೆರೆಯಲ್ಲಿ ಕುಡಿಯೋ ನೀರಿನಲ್ಲಿಯೂ ಇಲ್ಲಿ ರಾಜಕೀಯ ಮಾಡ್ತಿರೋ ಆರೋಪ ಕೇಳಿ ಬಂದಿದೆ. ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಮಾಜಿ ಸಚಿವ ಮಲ್ಲಿಕಾರ್ಜುನ್ ಅವರ ಕೈ ಹಿಡಿಯಲಿಲ್ಲ. ಇದ್ರಿಂದ ರೊಚ್ಚಿಗೆದ್ದಿರುವ ಮಲ್ಲಿಕಾರ್ಜುನ್ ಬೆಂಬಲಿಗರು ಮತದಾರರ ವಿರುದ್ಧವೇ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ.

ಮಲ್ಲಿಕಾರ್ಜುನ್ ಸೋಲಿಗೆ ಕಾರ್ಪೋರೇಟರ್ ಗಳೇ  ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್‍ಗಳಲ್ಲಿ ಎಲ್ಲೆಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಿದ್ದಿವೆಯೋ ಅಲ್ಲಿ ನೀರು ಸರಬರಾಜಲ್ಲಿ ವ್ಯತ್ಯಾಸ ಮಾಡೋ ಮೂಲಕ ಸೇಡು ತೀರಿಸಿಕೊಳ್ತಿದ್ದಾರೆ ಅಂತ ಬಿಜೆಪಿಯ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಗಂಭೀರ ಆರೋಪ ಮಾಡುತ್ತಿದ್ದಾರೆ.

ಕುಂದವಾಡ ಕೆರೆಯಿಂದ ಇಡೀ ದಾವಣಗೆರೆಗೆ ನೀರು ಪೂರೈಕೆಯಾಗ್ತಿದೆ. ಆದ್ರೆ ಕುಂದವಾಡಕ್ಕೆ 25 ದಿನವಾದ್ರೂ ನೀರು ಪೂರೈಕೆ ಆಗುತ್ತಿಲ್ಲ. ಕುಂದವಾಡ ಬಿಟ್ಟು ಉಳಿದ ಎಲ್ಲಾ ವಾರ್ಡ್ ಗೆ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಂದಹಾಗೆ ಕುಂದವಾಡ ಮಹಾನಗರ ವ್ಯಾಪ್ತಿಗೆ ಸೇರಿದೆ. ಹೀಗಾಗಿ ಇಲ್ಲಿನ ಜನ ಪಾಲಿಕೆ ಸದಸ್ಯರಿಗೆ ನೀರು ಕೊಡಿ ಸ್ವಾಮಿ ಅಂದ್ರೆ ಉದ್ಧಟತನ ಮೆರೆದಿದ್ದಾರೆ. ನಮಗೇನು ಕೇಳ್ತಿರಾ ನೀವು ವೋಟ್ ಹಾಕಿ ಗೆಲ್ಲಿಸಿದವರಿಗೆ ಕೇಳಿ ಹೋಗಿ ಅಂತ ಹೇಳಿದ್ದಾಗಿ ಸ್ಥಳೀಯರು ದೂರಿದ್ದಾರೆ.

Comments

Leave a Reply

Your email address will not be published. Required fields are marked *