ಬೆಳ್ಳಿ ಬೆಡಗು ಕಾರ್ಯಕ್ರಮ- ಪ್ರಧಾನಿಗೆ ವಚನಾನಂದ ಸ್ವಾಮೀಜಿ ಆಹ್ವಾನ

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿರುವ ವೀರ ಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜನವರಿ 13 ಮತ್ತು 14 ರಂದು ನಡೆಯುವ ಬೆಳ್ಳಿ ಬೆಡಗು ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಆಹ್ವಾನಿಸಿದ್ದಾರೆ.

2020ರ ಜನವರಿ 13 ಮತ್ತು 14ರ ಮಕರ ಸಂಕ್ರಾತಿ ಹಬ್ಬದ ದಿನದಂದು ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ಆವರಣದಲ್ಲಿ ಪೀಠಾಧ್ಯಕ್ಷರಾದ ಶ್ರೀ ವಚನಾನಂದ ಮಹಾಸ್ವಾಮಿಗಳು ಹಾಗೂ ಸಮಾಜದ ಮುಖಂಡರ ನೇತೃತ್ವದಲ್ಲಿ ಅದ್ಧೂರಿ ಹರ ಜಾತ್ರೆ ಹಾಗೂ ಬೆಳ್ಳಿ ಬೆಡಗು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನಿಯವರೇ ನೆರವೇರಿಸಬೇಕು ಎಂದು ವಚನಾನಂದ ಮಹಾಸ್ವಾಮಿಗಳು ದೆಹಲಿಗೆ ತೆರಳಿ ಆಮಂತ್ರಣ ನೀಡಿದ್ದಾರೆ.

ಪ್ರಧಾನಿಗಳು ತಮ್ಮ ಬಳಿ 15 ನಿಮಿಷಗಳ ಕಾಲ ಕಳೆದಿದ್ದು, ಮೋದಿಯವರಿಗೆ ವಿಭೂತಿ, ಇಷ್ಟಲಿಂಗ ಹಾಗೂ ಇನ್ನಿತರ ಯೋಗಾ ಪರಿಕರಗಳನ್ನು ನೀಡಿದ್ದೇವೆ. ಮೋದಿಯವರು ಖಂಡಿತವಾಗಿಯೂ ಕೂಡ ಕಾರ್ಯಕ್ರಮಕ್ಕೆ ಬರುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ವಚನಾನಂದ ಸ್ವಾಮೀಜಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ದಿವಂಗತ ಅನಂತ್‍ಕುಮಾರ್ ಅವರನ್ನು ಮೋದಿಯವರು ನೆನಪಿಸಿಕೊಂಡು ಕರ್ನಾಟಕದಿಂದ ತಮ್ಮನ್ನು ಭೇಟಿಯಾಗಲು ಯಾರೇ ಬಂದರೂ ಅವರನ್ನು ಕರೆದುಕೊಂಡು ಬರುತ್ತಿದ್ದರು ಎಂದು ನೆನಪಿಸಿಕೊಂಡರು ಎಂದು ಸ್ವಾಮೀಜಿಗಳು ಹೇಳಿದರು.

ಈ ಸಂದಂರ್ಭದಲ್ಲಿ ಕೇಂದ್ರ ಸಚಿವರಾದ  ಪ್ರಹ್ಲಾದ್ ಜೋಶಿ, ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕ ಮುರುಗೇಶ ನಿರಾಣಿ, ಶ್ರೀ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ ಹಾಗೂ ರಾಜ್ಯ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಬಿ. ನಾಗನಗೌಡರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *