ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ ಎಎಸ್‍ಐ

ದಾವಣಗೆರೆ: ಆರೋಪಿಗಳಿಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಬಾರದೆಂದು ಕಾನೂನೇ ಇದೆ. ಆದರೆ ದಾವಣಗೆರೆಯಲ್ಲಿ ಮಹಿಳಾ ಎಎಸ್‍ಐ ಒಬ್ಬರು ಮಹಿಳಾ ಆರೋಪಿಗೆ ರಕ್ತ ಹೆಪ್ಪುಗಟ್ಟುವಂತೆ ಥಳಿಸಿದ್ದಾರೆ.

ದಾವಣಗೆರೆಯ ಆಜಾಧ್ ನಗರ ಪೊಲೀಸ್ ಠಾಣೆಯ ಮಹಿಳಾ ಎಎಸ್‍ಐ ಸಮೀಮ್ ಬಾನು ಥರ್ಡ್ ಡಿಗ್ರಿ ನೀಡಿದ ಎಎಸ್‍ಐ ಆಗಿದ್ದು, ಕಳ್ಳತನದ ಆರೋಪದಲ್ಲಿ ಸಿಕ್ಕಿಬಿದ್ದ ರೇಷ್ಮಾಗೆ ಥಳಿಸಿದ್ದಾರೆ. ಪೊಲೀಸರ ಥಳಿತದಿಂದ ಆಘಾತಕ್ಕೊಳಗಾಗಿ ತೀವ್ರ ಗಾಯಗೊಂಡಿರುವ ರೇಷ್ಮಾ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾಳೆ.

ರೇಷ್ಮಾ ಕಳೆದ ಎಂಟು ವರ್ಷಗಳಿಂದ ದಾವಣಗೆರೆಯ ಅಹಮ್ಮದ ನಗರದ ಅಸದುಲ್ಲಾ ಸಾಬ್ ಎಂಬುವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ಅಸುದುಲ್ಲಾ ಅವರ ಮನೆಯಲ್ಲಿ ಶುಕ್ರವಾರ ಚಿನ್ನಾಭರಣ ಕಳುವಾಗಿತ್ತು. ಅವರು ಈ ಬಗ್ಗೆ ಅಜಾದ್‍ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಆರಂಭಿಸಿದ್ದ ಎಎಸ್‍ಐ ಸಮೀಮ್ ಬಾನು ವಿಚಾರಣೆಗೆಂದು ಕರೆದುಕೊಂಡು ರೇಷ್ಮಾಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಸಮೀಮ್ ಅವರು ರೇಷ್ಮಾಗೆ ಥರ್ಡ್ ಡಿಗ್ರಿ ಟ್ರೀಟ್‍ಮೆಂಟ್ ನೀಡಿದ್ದಾರೆ.

ಆರೋಪಿ ರೇಷ್ಮಾ ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ, ಟಾರ್ಚರ್ ನೀಡಿದ್ದಾರೆ. ರೇಷ್ಮಾಳ ಕಾಲು, ತೊಡೆ, ದೇಹದ ವಿವಿಧ ಭಾಗಗಳಲ್ಲಿ ಬಾಸುಂಡೆಗಳು ಮೂಡಿವೆ. ಲಾಠಿ ಹೊಡೆತಕ್ಕೆ ರೇಷ್ಮಾಳ ಚರ್ಮ ಹಪ್ಪುಗಟ್ಟಿದಂತಾಗಿದೆ. ಮಹಿಳಾ ಎಎಸ್‍ಐ ಆರೋಪಿ ಮಹಿಳೆಯನ್ನು ಮನಬಂದಂತೆ ಥಳಿಸಿದ್ದು ಅಮಾನವೀಯ ಎಂದು ಸ್ಥಳೀಯರು ಅಸಮಾಧಾನ ಹೊರ ಹಾಕಿದ್ದಾರೆ.

ವಿಚಾರಣೆ ಬಳಿಕ ಇಂದು ಹೊರ ಬಂದ ರೇಷ್ಮಾ ಪೊಲೀಸ್ ದೌರ್ಜನ್ಯದಿಂದ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿಹೋಗಿದ್ದಾಳೆ. ನೋವು ತಡೆಯಲಾರದೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಷ್ಟೇ ಅಲ್ಲದೆ ಈ ವಿಷಯವನ್ನು ಬಹಿರಂಗಪಡಿಸಿದರೆ ಮತ್ತೆ ಹೊಡೆಯುತ್ತೇವೆ ಎಂದು ಪೊಲೀಸು ಬೆದರಿಕೆ ಹಾಕಿದ್ದಾರೆ ಎಂದು ರೇಷ್ಮಾ ಸಂಬಂಧಿ ಆರೋಪಿಸಿದ್ದಾರೆ. ಪೊಲೀಸರ ಈ ದೌರ್ಜನ್ಯದ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ರೇಷ್ಮಾ ಸಂಬಂಧಿಕರು ಎಚ್ಚರಿಸಿದ್ದಾರೆ.

Comments

Leave a Reply

Your email address will not be published. Required fields are marked *