ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾದುಕಾದು ಸುಸ್ತಾದ 51 ಜನ ಗರ್ಭಿಣಿಯರು – ಕಡೆಗೂ ಸಿಗಲಿಲ್ಲ ಚಿಕಿತ್ಸೆ

ದಾವಣಗೆರೆ: ತಪಾಸಣೆಗೆ ಬಂದಿದ್ದ 50ಕ್ಕೂ ಹೆಚ್ಚು ಗರ್ಭಿಣಿಯರು ಚಿಕಿತ್ಸೆ ಸಿಗದೇ ಮರಳಿದ ಘಟನೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರಾಥಮಿಕ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.

ಪ್ರಧಾನಮಂತ್ರಿ ಮಾತೃತ್ವ ಕಾರ್ಯಕ್ರಮ ಯೋಜನೆಯಡಿ ಪ್ರತಿ ತಿಂಗಳ 9ರಂದು ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತಿತ್ತು. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಟ್ನನಹಳ್ಳಿ, ಫಣಿಯಾಪುರ, ಕೆಂಚಾಪುರ, ಕರಡಿದುರ್ಗ, ಕುರೇಮಾಗನಹಳ್ಳಿ, ಕಲ್ಲಹಳ್ಳಿ, ಬೇವಿನಹಳ್ಳಿ ಗ್ರಾಮಗಳಿಂದ ಗರ್ಭಿಣಿಯರು ಬಂದಿದ್ದರು.

ಬಹಳ ಸಮಯ ಕಳೆದರೂ ವೈದ್ಯ ಸುರೇಶ್ ಬಾರದೇ ಇದ್ದಾಗ, ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕರೆ ಮಾಡಿದ್ದಾರೆ. ಆದರೆ ಫೋನ್ ತೆಗೆಯದೇ ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಕರೆ ಮಾಡಿದ ಸುರೇಶ್ ನಾನು ಇವತ್ತು ರಜೆ ತೆಗೆದುಕೊಂಡಿದ್ದೇನೆ. ಹೀಗಾಗಿ ಆಸ್ಪತ್ರೆಗೆ ಬರುವುದಿಲ್ಲ ಅಂತ ದಿಢೀರ್ ಹೇಳಿದ್ದಾರೆ.

ತಿಂಡಿ, ನೀರು ಇಲ್ಲದೆ ಗರ್ಭಿಣಿಯರು ಬೆಳಗ್ಗೆಯಿಂದ ವೈದ್ಯರಿಗಾಗಿ ಕಾಯುತ್ತ ಕುಳಿತಿದ್ದರು. ಸಂಜೆಯವರೆಗೆ ವೈದ್ಯರ ಬರುವಿಕೆಗಾಗಿ ಕಾದು ಚಿಕಿತ್ಸೆ ಇಲ್ಲದೇ ಗರ್ಭಿಣಿಯರು ನರಳುವಂತಾಯಿತು. ಬಡವರಿಗಾಗಿಯೇ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಅಹಿತಕರ ಘಟನೆ ನಡೆದಿದ್ದಕ್ಕೆ ಸ್ಥಳೀಯರು ಹಾಗೂ ಗರ್ಭಿಣಿಯರ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ವೈದ್ಯರ ನಿರ್ಲಕ್ಷ್ಯ ಹೀಗೆ ಮುಂದುವರಿದರೆ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳ ಹಾಗೂ ವೈದ್ಯರ ಬಗ್ಗೆ ಗೌರವ ಇಲ್ಲದಂತಾಗುತ್ತದೆ. ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಮಹಿಳೆಯರು ಮತ್ತೊಮ್ಮೆ ತಪಾಸಣೆಗೆ ಆಸ್ಪತ್ರೆಗೆ ಬರುವುದು ಕಷ್ಟವಾಗುತ್ತದೆ. ಬಸ್ಸಿನಲ್ಲಿ ಪ್ರಯಾಣ ಮಾಡಲು ಅವರಿಗೆ ಕಷ್ಟವಾಗುತ್ತದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಮತ್ತೊಮ್ಮೆ ಆಸ್ಪತ್ರೆಗೆ ಬರುವ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *