ಬಿಸಿ ಸಟ್ಟುಗದಲ್ಲಿ ಅತ್ತೆಗೆ ಬರೆ- ನೆಲಕ್ಕುರುಳಿಸಿ ಒದ್ದು ಹಿಂಸೆ ನೀಡಿದ ಸೊಸೆ

ಉಡುಪಿ: ಅತ್ತೆ ಸೊಸೆ ಜಗಳ ಮಾವನೋ- ಗಂಡನೇ ಮಧ್ಯಪ್ರವೇಶಿಸುವ ತನಕ ಅನ್ನೋ ಮಾತಿದೆ. ಆದ್ರೆ ಉಡುಪಿಯಲ್ಲೊಬ್ಬಳು ಕ್ರೂರಿ ಸೊಸೆ ರಾಕ್ಷಸ ಪ್ರವೃತ್ತಿ ಮೆರೆದಿದ್ದಾಳೆ. ಸಿನೆಮಾ- ಸೀರಿಯಲ್‍ಗಳಲ್ಲಿ ನೋಡೋ ಅತ್ತೆ ಸೊಸೆ ಜಗಳಕ್ಕಿಂತ ವಿಪರೀತ ಇದು.

ಮನೆಯಲ್ಲಿದ್ದ ವೃದ್ಧ ಅತ್ತೆ- ಮಾವನಿಗೆ ಸೊಸೆ ಅಶ್ವಿನಿ ಪೈ ಮನಬಂದಂತೆ ಥಳಿಸಿದ್ದಾಳೆ. ಉಡುಪಿಯ ತೆಂಕ ನಿಡಿಯೂರು ಗ್ರಾಮದ ಕೆಳಾರ್ಕಳ ಬೆಟ್ಟುವಿನಲ್ಲಿ ಈ ಕೃತ್ಯ ನಡೆದಿದೆ. ಸಟ್ಟುಗ ಬಿಸಿ ಮಾಡಿ ಮೈಮೇಲೆಲ್ಲಾ ಬರೆ ಎಳೆದಿದ್ದಾಳೆ. ನೆಲಕ್ಕುರುಳಿಸಿ ಕಾಲಿಂದ ಒದ್ದು, ಮನ ಬಂದಂತೆ ಹಲ್ಲೆ ಮಾಡಿದ್ದಾಳೆ. ಮೊದಲೇ ವಯೋವೃದ್ಧರು ಸೊಸೆಯ ರಂಪಾಟದಿಂದ ದಿಗಿಲುಗೊಂಡಿದ್ದಾರೆ.

ವೆಂಕಟೇಶ ಪೈ ಮತ್ತು ವೀಣಾ ಪೈ ಸೊಸೆಯ ಅಟ್ಟಹಾಸದಿಂದ ಭಯಗೊಂಡು ಮಗ ಲಕ್ಷ್ಮಣ ಪೈ ಮನೆಯಿಂದ ಇನ್ನೊಬ್ಬ ಮಗ ರಮಾನಾಥ ಪೈ ಮನೆಗೆ ಶಿಫ್ಟ್ ಆಗಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೊಸೆ ಅಶ್ವಿನಿ ಪೈ ಮೇಲೆ ದೂರನ್ನು ನೀಡಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದನೆ ಮತ್ತು ಕೊಲೆಯತ್ನ ದೂರನ್ನು ಪೊಲೀಸರು ದಾಖಲು ಮಾಡಿಕೊಂಡಿದ್ದಾರೆ.

ಪ್ರಕರಣದ ದಾಖಲಾದ ಬಳಿಕ ಆರೋಪಿ ಅಶ್ವಿನಿ ಪೈ ಮತ್ತು ಪತಿ ಲಕ್ಷ್ಮಣ ಪೈ ಈಗ ಮನೆಯಿಂದ ಕಾಣೆಯಾಗಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಎರಡು ದಿನಗಳ ಕಾಲ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೆಂಕಟೇಶ್ ಪೈ ಮತ್ತು ವೀಣಾ ಪೈ ದಂಪತಿಯ ಮತ್ತಿಬ್ಬರು ಮಕ್ಕಳು ತಮ್ಮ ಜೊತೆ ಇರಿಸಿಕೊಂಡಿದ್ದಾರೆ. ಈ ಇಬ್ಬರು ವೃದ್ಧರ ಅವಸ್ಥೆಯನ್ನು ನೋಡಿದ್ರೆ ಎಂತಹವರಿಗೂ ಕರುಳು ಚುರ್ ಅನ್ನದೇ ಇರದು.

 

Comments

Leave a Reply

Your email address will not be published. Required fields are marked *