ದತ್ತಪೀಠಕ್ಕೆ ತೆರಳ್ತಿದ್ದ ಬಸ್ ಮೇಲೆ ಅನ್ಯ ಕೋಮಿನ ಗುಂಪಿನಿಂದ ಕಲ್ಲುತೂರಾಟ

ಕೋಲಾರ: ದತ್ತಪೀಠಕ್ಕೆ ತೆರಳುತ್ತಿದ್ದ ಬಸ್ ಮೇಲೆ ಅನ್ಯ ಕೋಮಿನ ಗುಂಪೊಂದು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ನಗರದ ಕ್ಲಾಕ್ ಟವರ್ ಬಳಿ ಕಳೆದ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಇದೇ ಸಂದರ್ಭಕ್ಕೆ ದತ್ತಪೀಠಕ್ಕೆ ತೆರಳುತ್ತಿದ್ದ ದತ್ತ ಮೇಲಾಧಾರಿಗಳ ಬಸ್ ಮೇಲೆ ಅಲ್ಲಿಯೇ ಸೇರಿದ್ದ ಗುಂಪಿನಲ್ಲಿದ್ದ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಕಿ ವ್ಯಾಲೆಟ್‌ನಿಂದ ಬಿಟ್ ಕಾಯಿನ್ ನಾಪತ್ತೆಯಾಗಿಲ್ಲ – ಬೆಂಗಳೂರು ಪೊಲೀಸರಿಂದ ಸ್ಪಷ್ಟನೆ

ಕ್ಲಾಕ್ ಟವರ್ ನಲ್ಲಿ ಈ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಸ್‍ನಲ್ಲಿದ್ದವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಹೊರಟಿದ್ದರು ಎನ್ನಲಾಗಿದ್ದು, ಶ್ರೀರಾಮ ಸೇನೆ ಕಾರ್ಯಕರ್ತರಿದ್ದ ಬಸ್ ಮೇಲೆ ಕಲ್ಲು ಬಿದ್ದಿದೆ. ಬಸ್‍ನಲ್ಲಿದ್ದ ಮೂವರು ಶ್ರೀರಾಮ ಸೇನೆ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಕಲ್ಲು ತೂರಾಟ ಮಾಡಿದವರನ್ನು ಈ ಕೂಡಲೇ ಬಂಧಿಸುವಂತೆ ಕೋಲಾರ ನಗರ ಠಾಣೆ ಎದುರು ನೂರಾರು ಶ್ರೀರಾಮ ಸೇನೆ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬಾರ್ ವಿರುದ್ಧ ರೊಚ್ಚಿಗೆದ್ದ ಮಹಿಳಾ ಮಣಿಗಳು – ಕುರ್ಚಿಗಳು ಪೀಸ್ ಪೀಸ್

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಇನ್ನೂ ನಗರದ ಕ್ಲಾಕ್ ಟವರ್‍ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸರು ಮೊಕ್ಕಾ ಹೂಡಿದ್ದಾರೆ. ಕೋಲಾರ ನಗರ ಪೊಲೀಸರು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸ್ಥಳಕ್ಕೆ ಎಸ್‍ಪಿ ಡಿ.ಕಿಶೋರ್ ಬಾಬು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Comments

Leave a Reply

Your email address will not be published. Required fields are marked *